ವಿಪಕ್ಷ ನಾಯಕನ ಸ್ಥಾನ, ರಾಜ್ಯಧ್ಯಕ್ಷರ ಆಯ್ಕೆ ವಿಳಂಬ ದೋರಣೆ: ಸದಾನಂದ ಗೌಡ ಅಸಮಾಧಾನ

Views: 0
ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ಹಾಗೂ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ಆಯ್ಕೆಗೆ ಪಕ್ಷದ ಹೈಕಮಾಂಡ್ ವಿಳಂಬ ಧೋರಣೆ ಅನುಸರಿಸುತ್ತಿರುವ ಬಗ್ಗೆ ಸಂಸದ ಡಿ.ವಿ ಸದಾನಂದ ಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ”ನಿಜಕ್ಕೂ ಇಷ್ಟು ವಿಳಂಬ ಆಗಿರೋದು ನೋವಿನ ಸಂಗತಿ” ಎಂದಿದ್ದಾರೆ.
ಈ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಖಂಡಿತವಾಗಿಯೂ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಆಯ್ಕೆ ವಿಳಂಬ ಆಗಿರೋದು ಹೌದು, ಇದು ನಮಗೆಲ್ಲ ಅತ್ಯಂತ ನೋವು ತಂದಿದೆ. ನಾನು ನಮ್ಮ ವರಿಷ್ಠರ ಬಳಿ ಮನವಿ ಮಾಡುತ್ತೇನೆ. ಈಗಲಾದರೂ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಬೇಗ ಮಾಡಿ, ಈ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ವರಿಷ್ಠರು ಉತ್ತರ ಕೊಡಬೇಕು” ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಜೆಡಿಎಸ್‌ನೊಂದಿಗಿನ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ”ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಜೆಡಿಎಸ್ ಪಕ್ಷದ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಮ್ಮ ಕರ್ನಾಟಕದ ಯಾವುದೇ ಬಿಜೆಪಿ ನಾಯಕರ ಜೊತೆಗೂ ವರಿಷ್ಠರು ಚರ್ಚೆ ಮಾಡಿಲ್ಲ. ನಮ್ಮನ್ನು ಹೊರಗಿಟ್ಟೇ ಅವರು ತೀರ್ಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.
”ಎನ್.ಡಿ.ಎ ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ವಿಚಾರದ ಬಗ್ಗೆ ತೀರ್ಮಾನ ಮಾಡುವಾಗ ನಮ್ಮನ್ನು ಹೊರಗಿಡುತ್ತಾರೆ. ಇದು ಕರ್ನಾಟಕಕ್ಕೆ ಸೀಮಿತ ಆಗಿಲ್ಲ, ಬೇರೆ ಬೇರೆ ರಾಜ್ಯಗಳಲ್ಲಿ ಮತ ಕ್ರೂಡೀಕರಣ ಆಗಬೇಕಿದೆ. ಹಾಗಾಗಿ ಹೈ ಲೆವೆಲ್‌ನಲ್ಲಿ ಚರ್ಚೆಯಾಗಲಿದೆ. ಅವರು ತೆಗೆದುಕೊಂಡ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ” ಎಂದು ಇದೇ ವೇಳೆ ಸದಾನಂದ ಗೌಡ ಸ್ಪಷ್ಟನೆ ನೀಡಿದ್ದಾರೆ.