ಇತರೆ

ಮನೆಯವರ ಒತ್ತಡಕ್ಕೆ ಮಣಿದು ಎರಡನೇ ಮದುವೆಯಾಗಲು ಮುಂದಾಗಿದ್ದ ವರ: ಏಳು ತಿಂಗಳ ಗರ್ಭಿಣಿ ಪತ್ನಿ ನಿಲ್ಲಿಸಿದ ಮದುವೆ

Views: 60

ಕನ್ನಡ ಕರಾವಳಿ ಸುದ್ದಿ: ಪ್ರೀತಿಸಿ ಮದುವೆಯಾಗಿ, ಪತ್ನಿ ಏಳು ತಿಂಗಳ ಗರ್ಭಿಣಿಯಾಗಿದ್ದರೂ ಮನೆಯವರ ಒತ್ತಡಕ್ಕೆ ಮಣಿದು ಎರಡನೇ ಮದುವೆಯಾಗಲು ಮುಂದಾಗಿದ್ದ ವರನಿಗೆ ಮೊದಲ ಪತ್ನಿ ಪೊಲೀಸರ ಮೂಲಕ ಶಾಕ್ ನೀಡಿದ ಘಟನೆ ದೊಡ್ಡಬಳ್ಳಾಪುರ ನಗರದ ಬಸವ ಭವನದಲ್ಲಿ ನಡೆದಿದೆ

ತನಗೆ ಮನೆಯವರು ಬಲವಂತವಾಗಿ ಮದುವೆ ಮಾಡಿಸುತ್ತಿದ್ದಾರೆ ಎಂಬ ವಿಚಾರವನ್ನು ಕುಮಾ‌ರ್ ತಡರಾತ್ರಿ ತನ್ನ ಮೊದಲ ಪತ್ನಿಗೆ ಕರೆ ಮಾಡಿ ತಿಳಿಸಿದ್ದ. ಈ ವಿಷಯ ತಿಳಿಯುತ್ತಿದ್ದಂತೆಯೇ ಕೇರಳದಿಂದ ದೊಡ್ಡಬಳ್ಳಾಪುರಕ್ಕೆ ಧಾವಿಸಿದ ಗರ್ಭಿಣಿ ಮಹಿಳೆ, ಕೂಡಲೇ ಸ್ಥಳೀಯ ಪೊಲೀಸರ ಸಹಾಯ ಕೋರಿದ್ದಾರೆ.

ದೊಡ್ಡಬಳ್ಳಾಪುರದ ಬಸವ ಭವನದಲ್ಲಿ ಮದುವೆ ಶಾಸ್ತ್ರಗಳು ಆರಂಭವಾಗುತ್ತಿದ್ದಂತೆಯೇ, ಗರ್ಭಿಣಿ ಪತ್ನಿಯೊಂದಿಗೆ ಪೊಲೀಸರು ಕಲ್ಯಾಣ ಮಂಟಪಕ್ಕೆ ಲಗ್ಗೆ ಇಟ್ಟಿದ್ದಾರೆ. ಮೊದಲ ಮದುವೆಯ ಬಗ್ಗೆ ಮಾಹಿತಿ ನೀಡಿದ ಮಹಿಳೆ, ಮದುವೆಯನ್ನು ನಿಲ್ಲಿಸುವಂತೆ ಪಟ್ಟು ಹಿಡಿದರು.ಗರ್ಭಿಣಿ ಮಹಿಳೆಯ ದೂರು ಮತ್ತು ಆಕೆಯ ಬಳಿಯಿದ್ದ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರು ತಕ್ಷಣವೇ ಮದುವೆಯನ್ನು ಸ್ಥಗಿತಗೊಳಿಸಿದ್ದಾರೆ.

ಘಟನೆಯ ವಿವರ ಮೂಲತಃ ಕುಮಾರ್ ಎಂಬ ಯುವಕ ಕಳೆದ ಒಂದು ವರ್ಷದ ಹಿಂದೆ ಕೇರಳ ಮೂಲದ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಇವರಿಬ್ಬರ ದಾಂಪತ್ಯ ಜೀವನ ಸುಗಮವಾಗಿ ಸಾಗುತ್ತಿತ್ತು ಮತ್ತು ಪತ್ನಿ ಈಗ ಏಳು ತಿಂಗಳ ಗರ್ಭಿಣಿಯಾಗಿದ್ದಾರೆ. ಆದರೆ, ಕುಮಾರ್ ಅವರ ಕುಟುಂಬಸ್ಥರು ಈ ಮದುವೆಯನ್ನು ಒಪ್ಪದ ಕಾರಣ, ಕುಮಾ‌ರ್ ಮೇಲೆ ಒತ್ತಡ ಹೇರಿ ಇಂದು (ಭಾನುವಾರ) ಮತ್ತೊಂದು ಮದುವೆಗೆ ಸಿದ್ಧತೆ ನಡೆಸಿದ್ದ.

ಸದ್ಯ ಪೊಲೀಸರು ವರ ಕುಮಾರ್‌ನನ್ನು ವಶಕ್ಕೆ ಪಡೆದು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಮೊದಲ ಮದುವೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ತನಿಖೆ ಮುಂದುವರಿದಿದೆ. ಮನೆಯವರ ಒತ್ತಡಕ್ಕೆ ಮಣಿದು ಮೊದಲ ಪತ್ನಿಯ ಬದುಕನ್ನು ಅತಂತ್ರ ಮಾಡಲು ಹೊರಟಿದ್ದ ಯುವಕನ ನಡೆ ಈಗ ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Related Articles

Back to top button
error: Content is protected !!