ವಾರ್ಷಿಕ 12 ಲಕ್ಷದವರೆಗೆ ಆದಾಯಕ್ಕೆ ತೆರಿಗೆ ಇಲ್ಲ

Views: 99
ಕನ್ನಡ ಕರಾವಳಿ ಸುದ್ದಿ:ಕೇಂದ್ರ ಸರ್ಕಾರದ ಈ ಸಾಲಿನ ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ಬಂಪರ್ ಕೊಡುಗೆ ಸಿಕ್ಕಿದ್ದು, ವಾರ್ಷಿಕ 12 ಲಕ್ಷದವರೆಗೆ ಆದಾಯ ಹೊಂದಿರುವವರಿಗೆ ಸಂಪೂರ್ಣ ತೆರಿಗೆ ವಿನಾಯ್ತಿಯನ್ನು ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಈ ಬಜೆಟ್‌ನಲ್ಲಿ ಮೊಬೈಲ್ ಫೋನ್‌ಗಳು, ಲಿಥಿಯಂ ಐಯಾನ್ ಬ್ಯಾಟರಿ, ಸಮುದ್ರ ಉತ್ಪನ್ನಗಳು, ಕ್ಯಾನ್ಸರ್ ಔಷಧಿ ಸೇರಿದಂತೆ 36 ಔಷಧಿಗಳು ಅಗ್ಗವಾಗಲಿವೆ.
ಲೋಕಸಭೆಯಲ್ಲಿಂದು ಕೇಂದ್ರದ 2025-26ನೇ ಬಜೆಟ್ ಮಂಡಿಸಿದ ಅವರು, ವಾರ್ಷಿಕ 12 ಲಕ್ಷದವರೆಗೆ ಆದಾಯ ಹೊಂದಿರುವವರು ಯಾವುದೇ ತೆರಿಗೆ ಕಟ್ಟುವಂತಿಲ್ಲ ಎಂಬ ಘೋಷಣೆ ಮಾಡಿದರು.
ಪ್ರತಿ ಬಾರಿಯೂ ಬಜೆಟ್ ಮಂಡನೆ ಸಮಯದಲ್ಲಿ ವೈಯುಕ್ತಿಕ ಆದಾಯ ತೆರಿಗೆ ವಿನಾಯ್ತಿಯನ್ನು ಹೆಚ್ಚಿಸಬೇಕು ಎಂಬ ದೇಶವಾಸಿಗಳ ಆಗ್ರಹಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರ, ಈ ಬಜೆಟ್‌ನಲ್ಲಿ ಬರೋಬರಿ 12 ಲಕ್ಷ ರೂ.ಗಳವರೆಗೆ ತೆರಿಗೆ ವಿನಾಯ್ತಿ ಘೋಷಣೆ ಮಾಡುವ ಮೂಲಕ ಮಧ್ಯಮ ವರ್ಗದವರಿಗೆ ದೊಡ್ಡ ಕೊಡುಗೆ ನೀಡಿದೆ.
ಈವರೆಗೂ 7ಲಕ್ಷ ರೂ.ಗಳವರೆಗಿನ ಆದಾಯಕ್ಕೆ ಯಾವುದೇ ತೆರಿಗೆಯನ್ನು ಕಟ್ಟುವಂತಿರಲಿಲ್ಲ. ಈಗ ಈ ತೆರಿಗೆ ವಿನಾಯ್ತಿಯನ್ನು 12 ಲಕ್ಷ ರೂ.ಗಳಿಗೆ ಏರಿಕೆ ಮಾಡಿ ವಿತ್ತ ಸಚಿವರು ಆದಾಯ ತೆರಿಗೆದಾರರಿಗೆ ಬಜೆಟ್‌ನಲ್ಲಿ ಸಿಹಿ ನೀಡಿದ್ದಾರೆ.
ಕೇಂದ್ರ ವಿತ್ತ ಸಚಿವೆ ನಿರ್ಮಾಲ ಸೀತಾರಾಮನ್ ಅವರು ಬಜೆಟ್‌ನಲ್ಲಿ ಆದಾಯ ತೆರಿಗೆಯ ಸ್ಲ್ಯಾಬ್‌ಗಳ ಬದಲಾವಣೆಯನ್ನು ಘೋಷಿಸಿ, 12 ಲಕ್ಷ ರೂ.ಗಳವರೆಗಿನ ಆದಾಯಕ್ಕೆ ತೆರಿಗೆ ಇಲ್ಲ ಎಂದು ಹೇಳಿದಾಗ, ಪ್ರಧಾನಿ ಮೋದಿ ಸೇರಿದಂತೆ ಆಡಳಿತ ಪಕ್ಷದ ಎಲ್ಲ ಸದಸ್ಯರು ಲೋಕಸಭೆಯಲ್ಲಿ ಮೇಜು ಕುಟ್ಟಿ ಹರ್ಷ ವ್ಯಕ್ತಪಡಿಸಿದರು.
ಈ ಬಜೆಟ್‌ನಲ್ಲಿ ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಆದಾಯ ತೆರಿಗೆಯ ಸ್ಲ್ಯಾಬ್‌ಗಳಲ್ಲೂ ಬದಲಾವಣೆ ಮಾಡಿದ್ದು, 12 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. 12 ಲಕ್ಷ ಮೀರಿದ ಆದಾಯಕ್ಕೆ ತೆರಿಗೆ ಘೋಷಿಸಿದ್ದು, 12 ಲಕ್ಷಕ್ಕೂ ಹೆಚ್ಚಿನ ಆದಾಯ ಹೊಂದಿರುವವರಿಗೆ 0 ಯಿಂದ 4 ಲಕ್ಷದವರೆಗೆ ತೆರಿಗೆ ಇರುವುದಿಲ್ಲ.
4ಲಕ್ಷದಿಂದ 8ಲಕ್ಷ ದವರೆಗೆ ಶೇ. 4 ರಷ್ಟು, 8 ಲಕ್ಷದಿಂದ 11 ಲಕ್ಷದವರೆಗಿನ ಆದಾಯಕ್ಕೆ ಶೇ. 10, 12 ಲಕ್ಷದಿಂದ 15 ಲಕ್ಷದವರೆಗಿನ ಆದಾಯಕ್ಕೆ ಶೇ. 15,16 ಲಕ್ಷದಿಂದ 20 ಲಕ್ಷದವರೆಗಿನ ಆದಾಯಕ್ಕೆ ಶೇ. 21,22 ಲಕ್ಷದಿಂದ 24 ಲಕ್ಷವರೆಗಿನ ಆದಾಯಕ್ಕೆ ಶೇ. 25 ರಷ್ಟು ತೆರಿಗೆ ಹಾಗೂ 25 ಲಕ್ಷ ಮೀರಿದ ಆದಾಯಕ್ಕೆ ಶೇ. 30 ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.
ಟಿಡಿಎಸ್ ಕಡಿತ
ಈ ಬಜೆಟ್‌ನಲ್ಲಿ ಹಿರಿಯ ನಾಗರಿಕರಿಗೆ 1 ಲಕ್ಷದವರೆಗೆ ಟಿಡಿಎಸ್ ವಿನಾಯ್ತಿಯನ್ನು ನೀಡಲಾಗಿದೆ. ಹಾಗೆಯೇ ಆದಾಯ ಮೂಲದಿಂದ ತೆರಿಗೆ ಸಂಗ್ರಹ ಮಿತಿಯನ್ನು 7 ಲಕ್ಷದಿಂದ 10 ಲಕ್ಷಕ್ಕೆ (ಟಿಸಿಎಸ್) ಹೆಚ್ಚಳ ಮಾಡಲಾಗಿದೆ. ವಿದೇಶದಿಂದ ರವಾನಿಸುವ ಹಣದ ಮೇಲಿನ ಟಿಡಿಎಸ್‌ನ್ನು ಕಡಿತ ಮಾಡಿದ್ದಾರೆ.
ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಪಾವತಿಗೆ ಟಿಡಿಎಸ್‌ನಿಂದ ವಿನಾಯ್ತಿ ನೀಡಲಾಗಿದೆ.
ಮೊಬೈಲ್-ಟಿವಿ, ಕ್ಯಾನ್ಸರ್ ಔಷಧಿ ಅಗ್ಗ
ಮೊಬೈಲ್ ಫೋನ್‌ಗಳಲ್ಲಿ ಬಳಸುವ ಲಿಥಿಯಂ ಐಯಾನ್ ಬ್ಯಾಟರಿ ತಯಾರಿಕೆಗೆ ಹೆಚ್ಚಿನ ಉತ್ತೇಜನ ನೀಡಿದ್ದು, ಸಮುದ್ರ ಉತ್ಪನ್ನಗಳನ್ನು ಹೆಚ್ಚಿಸಲು ಅಬಕಾರಿ ಸುಂಕವನ್ನು ಶೇ. 30 ರಿಂದ ಶೇ. 5 ಕ್ಕೆ ಇಳಿಕೆ ಮಾಡಲಾಗಿದ್ದು, ಇದರಿಂದ ಮೊಬೈಲ್ ಫೋನ್, ಎಲ್‌ಇಡಿ ಟಿವಿಗಳು ಅಗ್ಗವಾಗಲಿವೆ.
ಕ್ಯಾನ್ಸರ್ ಸೇರಿದಂತೆ ಅಪರೂಪದ ಕಾಯಿಲೆಗಳಿಗೆ ಸಂಬಂಧಿಸಿದ 36 ಔಷಧಗಳಿಗೆ ಆಮದು ಮೇಲಿನ ಅಬಕಾರಿ ಸುಂಕದಿಂದ ರಿಯಾಯ್ತಿ ನೀಡಲಾಗಿದ್ದು, ಕ್ಯಾನ್ಸರ್ ಔಷಧ ಸೇರಿದಂತೆ 36 ಔಷಧಗಳ ಬೆಲೆ ಇಳಿಕೆಯಾಗಲಿದೆ.
ಇದರ ಜತೆಗೆ ಚರ್ಮೋತ್ಪನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಲಾಗಿದ್ದು, ಚರ್ಮೋತ್ಪನ್ನಗಳ ಬೆಲೆಯೂ ಇಳಿಕೆಯಾಗಲಿದೆ.
ಲಿಥಿಯಂ ಐಯಾನ್ ಬ್ಯಾಟರಿ ಮೇಲಿನ ಅಬಕಾರಿ ಸುಂಕ ಕಡಿಮೆಯಾಗಿರುವುದರಿಂದ ಎಲೆಕ್ಟ್ರಾನಿಕ್ ಉಪಕರಣಗಳು ಅಗ್ಗವಾಗಲಿದ್ದು ಸ್ವದೇಶಿ ಬಟ್ಟೆಗಳ ಮೇಲಿನ ತೆರಿಗೆ ವಿನಾಯ್ತಿಯಿಂದ ಸ್ವದೇಶಿ ಬಟ್ಟೆಗಳು ಅಗ್ಗವಾಗಲಿವೆ.
ಪ್ಲಾಸ್ಟಿಕ್ ಟೆಲಿಕಾಂ ಉಪಕರಣ ದುಬಾರಿ
ಈ ಬಜೆಟ್‌ನಲ್ಲಿ ಪ್ಲಾಸ್ಟಿಕ್ ಉಪಕರಣಗಳ ಮೇಲಿನ ಅಬಕಾರಿ ಸುಂಕವನ್ನು ಶೇ. 25 ರಷ್ಟು ಹಾಗೂ ಟೆಲಿಕಾಂ ಉಪಕರಣಗಳ ಮೇಲಿನ ಅಬಕಾರಿ ಸುಂಕವನ್ನು ಶೇ. 10 ರಿಂದ 15 ರಷ್ಟು ಏರಿಕೆ ಮಾಡಲಾಗಿದ್ದು, ಪ್ಲಾಸ್ಟಿಕ್ ಮತ್ತು ಟೆಲಿಕಾಂ ಉಪಕರಣಗಳು ದುಬಾರಿಯಾಗಲಿವೆ. ಹಾಗೆಯೇ ಪ್ಯಾನಲ್ ಡಿಸ್‌ಪ್ಲೇ ಮೇಲಿನ ಅಬಕಾರಿ ಸುಂಕವನ್ನು ಶೇ. 10 ರಿಂದ ಶೇ. 20 ಕ್ಕೆ ಹೆಚ್ಚಳ ಮಾಡಲಾಗಿದೆ.
ತೆರಿಗೆ ಸರಳೀಕರಣಕ್ಕೆ ಹೊಸ ಮಸೂದೆ
ಬಜೆಟ್‌ನಲ್ಲಿ 12 ಲಕ್ಷ ರೂಪಾಯಿ ವರೆಗಿನ ಆದಾಯಕ್ಕೆ ತೆರಿಗೆ ವಿನಾಯ್ತಿ ಘೋಷಿಸಿರುವ ವಿತ್ತ ಸಚಿವ ನಿರ್ಮಲಾ ಸೀತರಾಮನ್ ಆದಾಯ ತೆರಿಗೆ ಪಾವತಿಯನ್ನು ಸರಳೀಕರಿಸುವ ನಿಟ್ಟಿನಲ್ಲಿ ಹೊಸ ಆದಾಯ ತೆರಿಗೆ ಮಸೂದೆಯನ್ನು ಮುಂದಿನ ವಾರ ಲೋಕಸಭೆಯಲ್ಲಿ ಮಂಡಿಸುವುದಾಗಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ 2025 ನೇ ಸಾಲಿನ ಬಜೆಟ್ ಭಾಷಣದಲ್ಲಿ ಅವರು, ಹೊಸ ಆದಾಯ ತೆರಿಗೆ ಕಾನೂನು ಜಾರಿಯನ್ನು ಪ್ರಕಟಿಸಿದರು.
1961ರ ಆದಾಯ ತೆರಿಗೆ ಕಾಯ್ದೆ ಪ್ರಸ್ತುತ ದೇಶದಲ್ಲಿ ಜಾರಿಯಲ್ಲಿದೆ. 2020 ರ ಬಜೆಟ್‌ನಲ್ಲಿ ಸರ್ಕಾರವು ಈ ಕಾನೂನಿನ ಅಡಿಯಲ್ಲೇ ಹೊಸ ತೆರಿಗೆ ಪದ್ದತಿಯನ್ನು ಜಾರಿಗೆ ತಂದಿತ್ತು. ಆದರೆ 2024 ರ ಜುಲೈನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ದೇಶದಲ್ಲಿ ಆದಾಯ ತೆರಿಗೆ ಕಾನೂನನ್ನು ಬದಲಾಯಿಸುವ ಅಗತ್ಯವಿದೆ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿತ್ತು. ಇದಕ್ಕಾಗಿ ಪರಿಶೀಲನಾ ಸಮಿತಿ ರಚಿಸಲಾಗಿತ್ತು. ಈಗ ಅದರ ಆಧಾರದ ಮೇಲೆ ಸರ್ಕಾರ ಹೊಸ ಮಸೂದೆಯನ್ನು ತರಲು ಮುಂದಾಗಿದೆ ಎಂದು ಅವರು ಹೇಳಿದರು.
ಈ ಬಜೆಟ್‌ನಲ್ಲಿ ಹೊಸ ಆದಾಯ ತೆರಿಗೆ ಮಸೂದೆಯಲ್ಲಿ ಏನಿರಲಿದೆ ಎಂಬುದನ್ನು ಸ್ಪಷ್ಟವಾಗಿ ಹೇಳದಿದ್ದರೂ ತೆರಿಗೆ ವ್ಯವಸ್ಥೆಯನ್ನು ಸರಳೀಕರಣಗೊಳಿಸುವ ಪ್ರಸ್ತಾವನೆಯನ್ನು ವಿತ್ತ ಸಚಿವರು ಮಾಡಿದ್ದು, ಹೊಸ ಆದಾಯ ತೆರಿಗೆ ಕಾನೂನು ನ್ಯಾಯ ನೀಡಲಿದೆ ಎಂದು ಹೇಳಿ, ಇದು ಈಗಿರುವ ಕಾನೂನಿಗಿಂತ ಸರಳವಾಗಿರುತ್ತದೆ. ಇದರಿಂದ ವ್ಯಾಜ್ಯಗಳು ಕಡಿಮೆಯಾಗಲಿವೆ ಎಂದು ಹೇಳಿದ್ದಾರೆ.