ರಾಜಕೀಯ

ಲೋಕಸಭಾ ಟಿಕೆಟ್​ಗಾಗಿ ಹೈಕಮಾಂಡ್​ಗೆ ಕಂಡೀಷನ್ಸ್​​​ ‘ಕೈ’ ಕೊಟ್ಟು ಬಂದ್ರಾ ಶೆಟ್ಟರ್?

Views: 74

ಬೆಂಗಳೂರು: ಧಾರವಾಡ ಲೋಕಸಭಾ ಮೇಲೆ ಕಣ್ಣಿಟ್ಟಿರುವ ಶೆಟ್ಟರ್ ಬಿಜೆಪಿ ಪಕ್ಷಕ್ಕೆ ಬರುವ ಮುನ್ನವೇ ಟಿಕೆಟ್​​​ ಖಾತ್ರಿ ಪಡಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ  ಶೆಟ್ಟರ್​​ ಸಹ ಸುಳಿವು ನೀಡಿದ್ದಾರೆ.

ಶೆಟ್ಟರ್​ ರಿಟರ್ನ್​ ಹಿಂದೆ ಕಂಡೀಷನ್​​ ಅಪ್ಲೈ ಇರುವಂತೆ ಕಾಣ್ತಿದೆ. ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ಬಿಜೆಪಿ ಸೇರ್ಪಡೆಗೆ ಲೋಕಸಭೆ ಟಿಕೆಟ್​​​ ವದಂತಿಯೊಂದು ದಟ್ಟವಾಗಿ ಹರಿದಾಡ್ತಿದೆ. ವಿಧಾನಸಭೆಗೆ ಸಿಗದ ಟಿಕೆಟ್​​, ಲೋಕಸಭೆಯಲ್ಲಿ ಗಿಟ್ಟಿಸಲೇಬೇಕು ಎಂಬ ಹಠಕ್ಕೆ ಶೆಟ್ಟರ್​​ ಬಿದ್ದಿದ್ದಾರೆ.

ಜಗದೀಶ್​​ ಶೆಟ್ಟರ್​​, ರಾಷ್ಟ್ರ ರಾಜಕಾರಣಕ್ಕೆ ತೆರಳಲು ಸಜ್ಜಾಗಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ‌ಸ್ಫರ್ಧೆಗೆ ಸಿದ್ಧ ಅಂತ ಹಿಂಟ್​​ ಬಿಟ್ಟುಕೊಟ್ಟಿದ್ದಾರೆ. ಅಚ್ಚರಿ ಎಂದ್ರೆ ಟಿಕೆಟ್​​​ ಕೊಡೊದಾದ್ರೆ ಧಾರವಾಡ ಕ್ಷೇತ್ರದಿಂದ ಮಾತ್ರ ನೀಡಿ ಅಂತ ಷರತ್ತು ಹಾಕಿದ್ದಾರೆ ಎನ್ನಲಾಗಿದೆ. ಬಿಜೆಪಿಗೆ ಮರಳುವ ವೇಳೆ ಇಟ್ಟಿರುವ ಈ ಹೊಸ ಬೇಡಿಕೆ ವರಿಷ್ಠರಿಗೂ ಇಕ್ಕಟ್ಟಿಗೆ ಸಿಲುಕಿಸಿದೆ.

ಧಾರವಾಡ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಬೇಕು ಎಂದು ಬೇಡಿಕೆ ಮಂಡಿಸಿರುವ ಶೆಟ್ಟರ್​​​, ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಬೇರೆಡೆ ಕಣಕ್ಕಿಳಿಸಿ ಎಂಬ ಮಾತು ಆಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಶೆಟ್ಟರ್​​​ ಕಾರಣವೊಂದನ್ನ ನೀಡಿದ್ದು, ಹಾಲಿ ಸಂಸದ ಪ್ರಲ್ಹಾದ್​ ಜೋಶಿ, ರಾಜ್ಯದ ಪ್ರಬಲ ಸಮುದಾಯವನ್ನು ಎದುರು ಹಾಕಿಕೊಂಡಿದ್ದಾರೆ. ಈ ಬಾರಿ ಧಾರವಾಡದಿಂದ ಸ್ಪರ್ಧೆ ಮಾಡಿದ್ರೆ, ಪ್ರಬಲ ಸಮುದಾಯ ಅವರ ಕೈ ಹಿಡಿಯುವುದಿಲ್ಲ ಎಂಬ ಚರ್ಚೆ, ಕ್ಷೇತ್ರದಲ್ಲಿದೆ ಅಂತ ಹೈಕಮಾಂಡ್​ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಶೆಟ್ಟರ್​​​ ಮಾತಿಗೆ ಇನ್ನೊಮ್ಮೆ ಚರ್ಚಿಸೋಣ ಅಂತ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಲೋಕಸಭಾ ಕ್ಷೇತ್ರದ ಟಿಕೆಟ್​​​ ಸಂಬಂಧ ಬಿಜೆಪಿಯಲ್ಲೇ ಪರ-ವಿರೋಧ ಶುರು ಆಗಿದೆ. ಜೋಶಿ ಪರ ಶಾಸಕ ಅರವಿಂದ್​ ಬೆಲ್ಲದ್​​ ಮತ್ತು ಮಹೇಶ್​​ ಟೆಂಗಿನಕಾಯಿ ಬ್ಯಾಟ್​​ ಬೀಸಿದ್ರೆ, ಮಾಜಿ ಸಚಿವ ಶಂಕರ್​​ ಪಾಟೀಲ್​​ ಮುನೇನಕೊಪ್ಪ, ಹೈಕಮಾಂಡ್​​ ನಿರ್ಧಾರ ಅಂತಿಮ ಎಂದಿದ್ದಾರೆ.

ಇನ್ನು, ಜೋಶಿ ಸಹ ಕ್ಷೇತ್ರದಲ್ಲಿ ಫುಲ್​ ಆ್ಯಕ್ಟಿವ್​​ ಆಗಿದ್ದಾರೆ. ವಿವಿಧ ಕಾರ್ಯಕ್ರಮ ಆಯೋಜಿಸಿ ಸಂಘಟನೆಯಲ್ಲಿ ನಿರತರಾಗಿದ್ದಾರೆ. ಜೋಶಿ, ಎಲೆಕ್ಷನ್​ಗೆ ತಯಾರಿ ನಡೆಸಿದ್ದೇನೆ ಅಂತ ಊಹಾಪೋಹಗಳಿಗೆ ಕೌಂಟರ್​​ ಕೊಟ್ಟಿದ್ದಾರೆ.

ಇತ್ತ, ಕಾಂಗ್ರೆಸ್​​​ ಮಾತ್ರ ಪಕ್ಷ ತೊರೆದು ಹೋದ ಶೆಟ್ಟರ್​​​ ಸೋಲಿಸಲು ಪಣತೊಟ್ಟಿದೆ. ಶೆಟ್ಟರ್‌ ಎಲ್ಲೇ ಸ್ಪರ್ಧಿಸಲಿ, ಅಲ್ಲಿ ತಕ್ಕ ಪಾಠ ಕಲಿಸೋದಾಗಿ ಶಪಥ ಮಾಡಿದೆ. ಒಟ್ಟಾರೆ, ಶೆಟ್ಟರ್ – ಜೋಶಿ ಕಳೆದ ಮೂರುವರೆ ದಶಕಗಳಿಂದಲೂ ಜೊತೆಯಾಗೇ ರಾಜಕಾರಣ ಮಾಡಿದವ್ರು. ಈಗ ವಿಧಾನಸಭೆ ಟಿಕೆಟ್​​​ ವಿಚಾರದಲ್ಲಿ ಹೊತ್ತಿದ ಬೆಂಕಿ ಲೋಕಸಭೆಗೂ ವ್ಯಾಪಿಸಿದಂತೆ ಕಾಣಿಸ್ತಿದೆ. ನಾಲ್ಕು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಜೋಷಿಗೆ ತಪ್ಪಿಸಿ ನಿಜಕ್ಕೂ ಶೆಟ್ಟರ್​​ಗೆ ಟಿಕೆಟ್​ ಕೊಡ್ತಾರಾ ಅನ್ನೋದು ಯಕ್ಷ ಪ್ರಶ್ನೆ.

Related Articles

Back to top button