ಮಂತ್ರಾಲಯ ಬಳಿ ಭೀಕರ ಅಪಘಾತ: ಮೂರು ವರ್ಷದ ಮಗು, ಐವರು ಮಹಿಳೆಯರು ಸೇರಿ, 8 ಮಂದಿ ಕನ್ನಡಿಗರು ಸಾವು
Views: 55
ಕನ್ನಡ ಕರಾವಳಿ ಸುದ್ದಿ: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಬಳಿ ಬುಲೆರೋ ವಾಹನಕ್ಕೆ ಟ್ಯಾಂಕರ್ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದ್ದು, ಮೂರು ವರ್ಷದ ಮಗು ಮತ್ತು ಐವರು ಮಹಿಳೆಯರು ಸೇರಿ ಒಟ್ಟು 8 ಮಂದಿ ಕನ್ನಡಿಗರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಚಿಲಕನಡೋಣ ಹತ್ತಿರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಚಿಕ್ಕಮಗಳೂರು ಮತ್ತು ಹಾಸನ ಮೂಲದ 8 ಜನ ಸ್ಥಳದಲ್ಲಿ ಮೃತಪಟ್ಟಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕರ್ನೂಲು, ಎಮ್ಮಿಗನೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಸನ, ಚಿಕ್ಕಮಗಳೂರು ಮೂಲದ 18 ಜನ ಬುಲೆರೋದಲ್ಲಿ ರಾಯರ ದರ್ಶನಕ್ಕಾಗಿ ಮಂತ್ರಾಲಯಕ್ಕೆ ತೆರಳುತ್ತಿದ್ದರು. ಈ ವೇಳೆ ಬೀದರ್‌ನಿಂದ ತುಮಕೂರಿಗೆ ತೆರಳುತ್ತಿದ್ದು ಫೈಯಾಶ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಮೃತರನ್ನು ಕುಮಾರ್(50), ದೀಪಿಕಾ(42), ಸುನಿಲ್(40) ಯಶೋಧಮ್ಮ(60), ಪುಟ್ಟಮ್ಮ (55), ಬೆಳ್ಳಿ( 3), ಲೋಲಾಕ್ಷಿ, ಮೀನಾಕ್ಷಿ ಎಂದು ಗುರುತಿಸಲಾಗಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಎಮ್ಮಿಗನೂರು ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.






