ಸಾಂಸ್ಕೃತಿಕ

ರಾಜ್ಯ ಚಲನಚಿತ್ರ ಅತ್ಯುತ್ತಮ ನಟ ಪ್ರಶಸ್ತಿ ತಿರಸ್ಕರಿಸಿದ ಕಿಚ್ಚ ಸುದೀಪ್‌

Views: 138

ಕನ್ನಡ ಕರಾವಳಿ ಸುದ್ದಿ: ನಟ ಕಿಚ್ಚ ಸುದೀಪ್ ಅಭಿನಯಕ್ಕೆ ರಾಜ್ಯ ಚಲನಚಿತ್ರ ಅತ್ಯುತ್ತಮ ನಟ ಎಂಬ ಪ್ರಶಸ್ತಿ ನೀಡಲಾಗಿತ್ತು. ಆದರೆ ನಟ ಸುದೀಪ್ ಈ  ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.

‘ಪೈಲ್ವಾನ್‍’ ಚಿತ್ರದ ಅಭಿನಯಕ್ಕಾಗಿ ಕಿಚ್ಚ ಸುದೀಪ್‍ ಅವರಿಗೆ ರಾಜ್ಯ ಸರ್ಕಾರವು ಅತ್ಯುತ್ತಮ ನಟ ಪ್ರಶಸ್ತಿಯನ್ನು ಘೋಷಿಸಿತ್ತು. ಸುದೀಪ್‍ ಈ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಪ್ರಶಸ್ತಿಗೆ ತಮ್ಮನ್ನು ಪರಿಗಣಿಸಿರುವುದಕ್ಕೆ ಧನ್ಯವಾದಗಳನ್ನು ಸೂಚಿಸುತ್ತಲೇ, ಚಿತ್ರರಂಗದಲ್ಲಿ ಸಾಕಷ್ಟು ಅರ್ಹರು ಇರುವುದರಿಂದ ಅವರಿಗೆ ಕೊಡಬೇಕೆಂದು ಹೇಳಿದ್ದಾರೆ.

ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿರುವ ಸುದೀಪ್‍, ‘ರಾಜ್ಯ ಸರ್ಕಾರದ ಅತ್ಯುತ್ತಮ ನಟ ಪ್ರಶಸ್ತಿಗೆ ನನ್ನ ಹೆಸರನ್ನು ಪರಿಗಣಿಸಿದ್ದಕ್ಕೆ ಧನ್ಯವಾದಗಳು. ಆದರೆ, ವೈಯಕ್ತಿಕ ಕಾರಣಾಂತರಗಳಿಂದ ನಾನು ಕಳೆದ ಕೆಲವು ವರ್ಷಗಳಿಂದ ಪ್ರಶಸ್ತಿಗಳನ್ನು ಸ್ವೀಕರಿಸುವುದನ್ನು ಬಿಟ್ಟಿದ್ದೇನೆ. ಈ ನಿರ್ಧಾರದಿಂದ ಸರಿಯುವುದಕ್ಕೆ ನನಗೆ ಇಷ್ಟವಿಲ್ಲ. ಚಿತ್ರರಂಗದಲ್ಲಿ ಹಲವು ಪ್ರತಿಭಾವಂತ ಮತ್ತು ಅರ್ಹ ಕಲಾವಿದರಿದ್ದಾರೆ. ಅವರಿಗೆ ಪ್ರಶಸ್ತಿ ಬರುವುದನ್ನು ನಾನು ಸಂತೋಷಪುಡತ್ತೇನೆ’ ಎಂದು ಸುದೀಪ್‍ ಹೇಳಿದ್ದಾರೆ.

ಯಾವುದೇ ಪ್ರಶಸ್ತಿಯ ಆಸೆ ಇಲ್ಲದೆ, ಪ್ರೇಕ್ಷಕರನ್ನು ಮನರಂಜಿಸುವುದಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿಕೊಂಡಿರುವ ಅವರು, ‘ಆಯ್ಕೆ ಸಮಿತಿ ಈ ಪ್ರಶಸ್ತಿಗೆ ನನ್ನನ್ನು ಪರಿಗಣಿಸಿದ್ದು ಇನ್ನಷ್ಟು ಉತ್ತಮ ಕೆಲಸ ಮಾಡುವುದಕ್ಕೆ ಸ್ಫೂರ್ತಿ ತುಂಬಿದೆ” ಎಂದು ಬರೆದುಕೊಂಡಿದ್ದಾರೆ.

ರಾಜ್ಯ ಸರ್ಕಾರ ಮತ್ತು ಆಯ್ಕೆ ಸಮಿತಿಯವರು ನನ್ನ ಪ್ರತಿಭೆ ಪುರಸ್ಕರಿಸಿ ನೀಡಿದ ಪ್ರಶಸ್ತಿಯನ್ನು ಒಪ್ಪದಿರುವುದಕ್ಕೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

 

Related Articles

Back to top button