ಶಿಕ್ಷಣ

ಯಡಾಡಿ- ಮತ್ಯಾಡಿ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ತರಬೇತಿ ಕಾರ್ಯಾಗಾರ

"ಮಕ್ಕಳ ಜ್ಞಾನ ಮಟ್ಟ ಅಳೆಯಲು ಅಂಕ ಗಳಿಕೆಯೊಂದೇ ಆಧಾರವಲ್ಲ" - ಅಬ್ದುಲ್ ರವೂಫ್

Views: 78

ಕನ್ನಡ ಕರಾವಳಿ ಸುದ್ದಿ: “ಮಕ್ಕಳನ್ನು ಕೇವಲ ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತವಾಗಿರಿಸದೆ, ಮಕ್ಕಳು ಎಲ್ಲಾ ವಿಧದ ಜ್ಞಾನಗಳನ್ನು ಪಡೆಯುವ ಅವಕಾಶವನ್ನು ಕಲ್ಪಿಸಿಕೊಡಬೇಕು. ಶಿಕ್ಷಣದ ನಿಜವಾದ ಕಲ್ಪನೆಯು ಮಕ್ಕಳಲ್ಲಿ ಅಡಕವಾಗಿರುವ ಎಲ್ಲಾ ಪ್ರತಿಭೆಯನ್ನು ಹೊರ ಜಗತ್ತಿಗೆ ಪರಿಚಯಿಸುವುದಾಗಿದೆ. ಹೆಚ್ಚು ಹೆಚ್ಚು ಚಟುವಟಿಕೆಗಳನ್ನು ಪಠ್ಯದ ಜೊತೆಯಲ್ಲಿ ಅಳವಡಿಸಿಕೊಂಡಾಗ ಮಕ್ಕಳು ಆಸಕ್ತಿದಾಯಕ ಕಲಿಕೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ. ಶಿಕ್ಷಕರು ಹೆಚ್ಚು ತರಬೇತಿಗಳಲ್ಲಿ,ಕಾರ್ಯಗಾರಗಳಲ್ಲಿ ಪಾಲ್ಗೊಂಡು ಹೆಚ್ಚಿನ ಜ್ಞಾನವನ್ನು ಪಡೆದಾಗ ಮಕ್ಕಳು ಹೆಚ್ಚು ಕ್ರಿಯಾಶೀಲತೆಯಿಂದ ಕಲಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಸಾಧ್ಯವಾಗುತ್ತದೆ. ಮಕ್ಕಳ ಜ್ಞಾನವನ್ನು, ಬುದ್ಧಿ ಮಟ್ಟವನ್ನು ಅಳೆಯಲು ಪಠ್ಯದ ಅಂಕಗಳಿಕೆಯೊಂದೇ ಮೂಲ ಆಧಾರವಾಗಲಾರದು. ಮಕ್ಕಳು ಎಲ್ಲಾ ಜ್ಞಾನವನ್ನು ಪಡೆದು ಸರ್ವಾಂಗೀಣ ಪ್ರಗತಿ ಹೊಂದಿದಾಗ ಪಡೆದ ಶಿಕ್ಷಣ ಸಾರ್ಥಕವಾಗುತ್ತದೆ. ಇದಕ್ಕೆ ಶಿಕ್ಷಕರ ತರಬೇತಿ ಕಾರ್ಯಗಾರಗಳು ಹೆಚ್ಚು ಸಹಕಾರಿಯಾಗುತ್ತದೆ” ಎಂದು ಹೆಸ್ಕುತೂರು ಶಾಲೆಯ ಮುಖ್ಯ ಶಿಕ್ಷಕ ಅಬ್ದುಲ್ ರವೂಫ್ ಹೇಳಿದರು.

ಅವರು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೇ 26 ರಿಂದ 28 ರ ವರೆಗೆ ಆಯೋಜಿಸಿದ ಮೂರು ದಿನಗಳ ಶಿಕ್ಷಕರ ತರಬೇತಿ ಕಾರ್ಯಗಾರ ಒರಿಯೆಂಟೇಷನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಸಂಸ್ಥೆಯ ಆಡಳಿತ ಮಂಡಳಿ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ರಮೇಶ್ ಶೆಟ್ಟಿ ಮಾತನಾಡುತ್ತಾ, ” ಇಂತಹ ತರಬೇತಿ ಕಾರ್ಯಕ್ರಮಗಳನ್ನು ನಾವು ಕಳೆದ ಹಲವು ವರ್ಷಗಳಿಂದ ನಡೆಸುತ್ತಿದ್ದು ಶಿಕ್ಷಕರನ್ನು ಇನ್ನಷ್ಟು ಕ್ರಿಯಾಶೀಲರಿನ್ನಾಗಿಸಲು ಸಾಧ್ಯವಾಗುತ್ತದೆ. ಪ್ರತಿದಿನವೂ ಬದಲಾವಣೆ ಹೊಂದುತ್ತಿರುವ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ಹೊಸ ಹೊಸ ಚಿಂತನೆಗಳನ್ನು ಅಳವಡಿಸಿಕೊಂಡು ಇಂದಿನ ಶೈಕ್ಷಣಿಕ ವಿದ್ಯಾಮಾನಕ್ಕೆ ಹೊಂದಿಕೊಳ್ಳುವುದು ಅತ್ಯಗತ್ಯ. ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳನ್ನು ಕಲಿಕಾ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಮಾಡಲು ಶಿಕ್ಷಕರ ತರಬೇತಿ ಕಾರ್ಯಾಗಾರಗಳು ತುಂಬಾ ಸಹಕಾರಿಯಾಗುತ್ತಿದೆ” ಎಂದರು.

ಮೊದಲ ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಫ್ರೀಲ್ಯಾನ್ಸ್ ಅಕಾಡೆಮಿಕ್ ಕೌನ್ಸಿಲ್ ಕನ್ಸಲ್ಟೆಂಟ್ ಆಂಡ್ ಸಾಫ್ಟ್ ಸ್ಕಿಲ್ಸ್ ತರಬೇತುದರಾಗಿರುವ ಶ್ರೀಮತಿ ಅರುಣ. ಎಸ್ ಭಾಗವಹಿಸಿದರು. ಸಂಸ್ಥೆಯ ಶಿಕ್ಷಕರು ಬಹಳ ಆಸಕ್ತಿಯಿಂದ ತರಬೇತಿಯಲ್ಲಿ ಪಾಲ್ಗೊಂಡರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಶಿಕ್ಷಕರಾದ ಪ್ರದೀಪ್ ಕೆ ಹಾಗೂ ಓರಿಯಂಟಲ್ ಬ್ಲಾಕ್ ಸ್ವಾನ್ ಪ್ರಕಾಶನದ ಶ್ರೀಯುತ ಚೇತನ್ ಉಪಸ್ಥಿತರಿದ್ದರು. ಶಿಕ್ಷಕಿ ಸುಧಾ ಕಾರ್ಯಕ್ರಮ ನಿರೂಪಿಸಿದರು.

Related Articles

Back to top button