ಮಹಾಕುಂಭ ಮೇಳ: ಮೋದಿ, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ

Views: 89
ಕನ್ನಡ ಕರಾವಳಿ ಸುದ್ದಿ: ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಪ್ರಯಾಗ್‌ರಾಜ್‌ನಲ್ಲಿ ಇಂದು ಪವಿತ್ರ ಸ್ನಾನ ಮಾಡಿ ವಿಶೇಷ ಪೂಜೆ ನೆರವೇರಿಸಿದರು.
ಇಂದು ಮಾಘ ಅಷ್ಠಮಿ ಮತ್ತು ಭೀಷ್ಮ ಅಷ್ಠಮಿಯ ದಿನ ಇದು ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರವಾದ ದಿನವೂ ಹೌದು. ಈ ಹಿನ್ನೆಲೆಯಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆದಿರುವ ಐತಿಹಾಸಿಕ ಕುಂಭಮೇಳದಲ್ಲಿ ಪ್ರಧಾನಿಯವರು ಭಾಗವಹಿಸಿದರು.
ದೋಣಿ ಮೂಲಕ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮಘಾಟ್‌ಗೆ ತೆರಳಿದ ಮೋದಿ ಕೊರಳಲ್ಲಿ ರುದ್ರಾಕ್ಷಿ ಮಾಲೆ, ಕೇಸರಿ ಹಾಗೂ ಕಡುನೀಲಿ ಬಣ್ಣದ ವಸ್ತ್ರ ತೊಟ್ಟು ಪುಣ್ಯಸ್ನಾನ ಮಾಡಿದರು. ಈ ಸಂದರ್ಭದಲ್ಲಿ ರುದ್ರಾಕ್ಷಿಮಾಲೆಯನ್ನು ಹಿಡಿದು ಸೂರ್ಯದೇವ ಮತ್ತು ಗಂಗಾಮಾತೆಗೆ ನಮಸ್ಕರಿಸಿದರು.
ಹಿಂದೂಗಳಿಗೆ ಪವಿತ್ರ ದಿನ ಎಂದೇ ಹೇಳಲಾಗುವ ರಥಸಪ್ತಮಿ ದಿನದಂದೇ ಮೋದಿ ಅವರು ಪುಣ್ಯಸ್ನಾನ ಮಾಡಿದ್ದಾರೆ. ರಥಸಪ್ತಮಿ ಹಬ್ಬವನ್ನು ರೈತರಿಗೆ ಸುಗ್ಗಿಯ ಆರಂಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ದಿನದಿಂದಲೇ ಬೇಸಿಗೆ ಕಾಲವೂ ಆರಂಭವಾಗಲಿದೆ.
ಈ ದಿನವನ್ನು ದಾನ-ಧರ್ಮ ಮಾಡಲು ವಿಶೇಷ ದಿನವೆಂದು ಹೇಳಲಾಗಿದೆ. ಈ ದಿನದಂದು ದಾನ ಮಾಡಿದರೆ ಎಲ್ಲ ಪಾಪಗಳು ಮತ್ತು ರೋಗಗಳಿಂದ ಪರಿಹಾರ ಪ್ರಾಪ್ತವಾಗುತ್ತದೆ.
ಈ ದಿನದಂದು ಸೂರ್ಯೋದಯಕ್ಕೆ ಮೊದಲು ಸ್ನಾನ ಮಾಡುವ ಸಂಪ್ರದಾಯವಿದ್ದು, ಈ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಚರ್ಮಕ್ಕೆ ಸಂಬಂಧಿಸಿದ ರೋಗಗಳು ಗುಣಮುಖವಾಗುತ್ತವೆ ಎಂಬ ನಂಬಿಕೆಯೂ ಇದೆ. ಇದಕ್ಕಾಗಿ ರಥ ಸಪ್ತಮಿಯನ್ನು ಆರೋಗ್ಯ ಸಪ್ತಮಿ ಎಂದು ಕರೆಯಲಾಗುತ್ತದೆ. ಹೀಗಾಗಿ ಮೋದಿ ದೇಶಕ್ಕೆ ಒಳಿತಾಗಲಿ ಎನ್ನುವ ಉದ್ದೇಶದಿಂದ ಪುಣ್ಯ ಸ್ನಾನ ಮಾಡಿದ್ದಾರೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.
ಇದಕ್ಕೂ ಮೊದಲು ಪ್ರಧಾನಿಯವರು ತ್ರಿವೇಣಿ ಸಂಗಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಅವರೊಂದಿಗೆ ಕೆಲಕಾಲ ದೋಣಿ ವಿಹಾರ ನಡೆಸಿದರು.
ದೋಣಿ ವಿಹಾರದ ವೇಳೆ ಪ್ರಧಾನಿಯವರು ನೆರೆದಿದ್ದ ಜನಸ್ತೋಮದತ್ತ ಕೈ ಬೀಸಿದ್ದು ಗಮನ ಸೆಳೆಯಿತು, ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಪ್ರಯಾಗ್‌ರಾಜ್ ಮತ್ತು ಕುಂಭನಗರಿಯಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು.
ಪೌಶ ಪೂರ್ಣಿಮೆಯಂದು ಆರಂಭವಾದ ಈ ಮಹಾಕುಂಭ ಮೇಳ ವಿಶ್ವದ ಅತೀ ದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮೇಳವಾಗಿದ್ದು, ಜಗತಿನಾದ್ಯಂತ ಭಕ್ತರ ದಂಡೇ ಕುಂಭ ಮೇಳಕ್ಕೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಕೋಟ್ಯಂತರ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಫೆ.26 ರಂದು ಮಹಾ ಶಿವರಾತ್ರಿಯವರೆಗೂ ಈ ಕುಂಭಮೇಳ ನಡೆಯಲಿದೆ.