ಪುಷ್ಪ 2 ಅತಿ ಕಡಿಮೆ ಅವಧಿಯಲ್ಲಿ 1000 ಕೋಟಿ ಕಲೆಕ್ಷನ್, ಭಾರತೀಯ ಸಿನಿಮಾ ಇತಿಹಾಸದಲ್ಲೇ ಮೊಟ್ಟ ಮೊದಲ ದಾಖಲೆ!

Views: 84
ಕನ್ನಡ ಕರಾವಳಿ ಸುದ್ದಿ: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯ ಹಾಗೂ ಸುಕುಮಾರ್ ನಿರ್ದೇಶನಕ್ಕೆ ಪ್ರೇಕ್ಷಕರು ಬಹುಪರಾಕ್ ಹಾಕಿದ್ದಾರೆ. ದಿನದಿಂದ ದಿನಕ್ಕೆ ಪುಷ್ಪರಾಜ್ ಹವಾ ಹೆಚ್ಚಾಗಿದ್ದು, ಕೇವಲ 6 ದಿನದಲ್ಲಿ ಪುಷ್ಪಾ 2 ಸಿನಿಮಾ ಭರ್ಜರಿ 1002 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಭಾರತೀಯ ಸಿನಿಮಾ ಇತಿಹಾಸದಲ್ಲೇ ಮೊಟ್ಟ ಮೊದಲ ದಾಖಲೆ ಆಗಿದೆ.
ಪುಷ್ಪ 2 ಸಿನಿಮಾ ಅತಿ ಕಡಿಮೆ ಅವಧಿಯಲ್ಲಿ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಸಿನಿಮಾ ಆಗಿದೆ. ಚಿತ್ರ ತಂಡದ ಅಧಿಕೃತ ಘೋಷಣೆ ಪ್ರಕಾರ ಕಳೆದ 6 ದಿನಗಳಲ್ಲಿ ಪುಷ್ಪಾ 2 ಬರೋಬ್ಬರಿ 1002 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಬಾಕ್ಸ್ ಆಫೀಸ್‌ನಲ್ಲಿ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಸಿನಿಮಾ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಜಗತ್ತಿನಾದ್ಯಂತ ಅತ್ಯುತ್ತಮ ಪ್ರದರ್ಶನ ಕಾಣುತ್ತಿರುವ ಪುಷ್ಪ 2 ಸಿನಿಮಾ ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೆಯುತ್ತಿದೆ. ಸುಕುಮಾರ್ ನಿರ್ದೇಶನದ ಚಿತ್ರ ಹೊಸ, ಹೊಸ ದಾಖಲೆಯನ್ನು ಸೃಷ್ಟಿಸುವತ್ತ ಮುನ್ನುಗ್ಗುತ್ತಾ ಇದೆ.
ಕಳೆದ ಡಿಸೆಂಬರ್ 5ರಂದು ಬಿಡುಗಡೆಯಾಗಿರುವ ಪುಷ್ಪ 2 ಮೊದಲ ದಿನವೇ ಬರೋಬ್ಬರಿ 294 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಮೊದಲ 3 ದಿನಗಳಲ್ಲಿ ಪುಷ್ಪ 2 ಕಲೆಕ್ಷನ್ 500 ಕೋಟಿಯನ್ನು ದಾಟಿದೆ. ಅದೇ 6 ದಿನದಲ್ಲಿ 1002 ಕೋಟಿ ರೂಪಾಯಿ ಗಳಿಸಿರೋದು ವಿಶೇಷವಾಗಿದೆ.
ಪುಷ್ಪ 2 ಸಿನಿಮಾ ಕೇವಲ ತೆಲುಗು ವೀಕ್ಷಕರಿಗಷ್ಟೇ ಇಷ್ಟವಾಗಿಲ್ಲ. ಕನ್ನಡ, ತಮಿಳು ಪ್ರೇಕ್ಷಕರು ಪುಷ್ಪ 2 ಚಿತ್ರದ ಮೋಡಿಗೆ ಒಳಗಾಗಿದ್ದಾರೆ. ಹಿಂದಿ ಭಾಷೆ ಮಾತನಾಡುವ ರಾಜ್ಯಗಳಲ್ಲೂ ಪುಷ್ಪ 2 ಸಿನಿಮಾ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಹಿಂದಿಯಲ್ಲೂ ಪುಷ್ಪ 2 ಯಾವ ಸಿನಿಮಾ ಕೂಡ ಗಳಿಸದಷ್ಟು ಕಲೆಕ್ಷನ್ ಮಾಡಿದೆ.