ಧರ್ಮಸ್ಥಳ ನಿಗೂಢ ಸಾವಿನ ತನಿಖೆಯ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಕೇಂದ್ರದ ಸೇವೆಗೆ ‘ಬುಲಾವ್’!

Views: 196
ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳ ನಿಗೂಢ ಸಾವಿನ ಪ್ರಕರಣ ತನಿಖೆಗೆ ಇಳಿದಿರುವ ಎಸ್‌ಐಟಿಯ ಮುಖ್ಯಸ್ಥ ಪ್ರಣವ್ ಮೊಹಂತಿ ಅವರನ್ನು ಕೇಂದ್ರದ ಸೇವೆಗೆ ‘ಬುಲಾವ್’ ಸಿಕ್ಕಿರುವುದು ಕುತೂಹಲಕ್ಕೆ ಕಾರಣವಾಗಿದೆ.
35 ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಕಳುಹಿ ಸಲು ರಾಜ್ಯ ಗೃಹ ಇಲಾಖೆಗೆ ಸೂಚನೆ ನೀಡಿರುವುದರಿಂದ, ಇದೀಗ ರಾಜ್ಯ ಸರಕಾರ ಮೊಹಂತಿ ಅವರನ್ನು ಕೇಂದ್ರ ಸೇವೆಗೆ ಕಳುಹಿಸು ವುದೋ ಅಥವಾ ಈ ಪ್ರಕರಣದ ಹಿನ್ನೆಲೆಯಲ್ಲಿ ತಿರಸ್ಕರಿಸುವುದೋ ಎನ್ನುವ ಕುತೂಹಲ ಮೂಡಿದೆ.
ಕೇಂದ್ರ ಸರಕಾರದ ನೇಮಕಾತಿಗಳ ಸಂಪುಟ ಸಮಿತಿಯು ಇತ್ತೀಚೆಗೆ ನಡೆಸಿದ ಸಭೆಯಲ್ಲಿ ದೇಶಾ ದ್ಯಂತ 35 ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಆಯ್ಕೆ ಮಾಡಿದೆ. ಈ ಪಟ್ಟಿಯಲ್ಲಿ ಕರ್ನಾಟಕದಿಂದ ಸ್ಥಾನ ಪಡೆದ ಏಕೈಕ ಅಧಿಕಾರಿ ಪ್ರಣಬ್ ಮೊಹಂತಿ ಆಗಿದ್ದಾರೆ. ಈ ಹಿಂದೆಯೂ ಅವರು ಸ್ವಲ್ಪ ಸಮಯ ಕೇಂದ್ರ ಸೇವೆಯಲ್ಲಿದ್ದರು.
ಇದೀಗ ಮತ್ತೆ ಕೇಂದ್ರ ಸೇವೆಗೆ ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಸಿಬಿಐ ಮತ್ತು ಎನ್ ಐಎಯಂತಹ ಸಂಸ್ಥೆಗಳ ಮಹಾನಿರ್ದೇಶಕ ಹುದ್ದೆಗಳಿಗೆ ಅರ್ಹರಾಗಿದ್ದಾರೆ. ಒಂದು ವೇಳೆ ಮೊಹಂತಿ ಕೇಂದ್ರ ಸೇವೆಗೆ ಹೋದರೆ, ಸಿಬಿಐ ಅಥವಾ ಎನ್‌ಐಎನಂತಹ ಸಂಸ್ಥೆಗಳ ಮಹಾ ನಿರ್ದೇಶಕರಾಗುವ ಅರ್ಹತೆ ಪಡೆದಿದ್ದಾರೆ.
ಚರ್ಚಿಸಿ ತೀರ್ಮಾನ: ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ, ಎಸ್‌ಐಟಿಯ ಮುಖ್ಯಸ್ಥ ಪ್ರಣಬ್ ಮೊಹಾಂತಿಯ ವರನ್ನು ಕೇಂದ್ರ ಸೇವೆಗೆ ಕರೆಸಿಕೊಂಡರೆ ಎಸ್‌ಐಟಿಗೆ ಬೇರೆ ಅಧಿಕಾರಿಯನ್ನು ನೇಮಿಸಲಾಗುವುದು. ಪ್ರಣಬ್ ಮೊಹಂತಿ ಕೇಂದ್ರ ಸೇವೆಗೆ ಆಯ್ಕೆಯಾಗುವುದಾದರೆ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದರು. ಕಾನೂನು ಪ್ರಕಾರ, ಯಾವೆಲ್ಲಾ ಅಂಶಗಳಿವೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಪ್ರಣಬ್ ಮೊಹಂತಿ ಕೇಂದ್ರ ಸೇವೆಗೆ ನಿಯೋಜನೆಗೊಂಡರೂ ಎಸ್‌ಐಟಿ ತನಿಖೆಯನ್ನು ಮುಂದುವರಿಸಬಹುದೇ ಎಂಬುದರ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದರು.
ಸದ್ಯ ಅವರು ಧರ್ಮಸ್ಥಳದ ನಿಗೂಢ ಸಾವಿನ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಕೇಂದ್ರ ಸೇವೆಗೆ ಹೋಗುತ್ತಾರಾ ಇಲ್ಲವಾ ಎಂಬುದು ಪ್ರಾಮುಖ್ಯತೆ ಪಡೆದುಕೊಂಡಿದೆ.






