ರಾಜಕೀಯ

ತಾರಕಕ್ಕೇರಿದ ಬಿಜೆಪಿ ಒಳಜಗಳ..ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡದೆ ಹೋದರೆ ಪಕ್ಷಕ್ಕೆ ಉಳಿಗಾಲವಿಲ್ಲ! 

Views: 47

ಕನ್ನಡ ಕರಾವಳಿ ಸುದ್ದಿ:ರಾಜ್ಯ ಬಿಜೆಪಿಯಲ್ಲಿನ ಒಳಜಗಳವನ್ನು ಲಗಾಮು ಹಾಕಿ ಎಲ್ಲರನ್ನು ಒಂದೇ ವೇದಿಕೆಯಡಿ ಕರೆದೊಯ್ಯುವ ಕೆಲಸವನ್ನು ಹೈಕಮಾಂಡ್‌‍ ಮಾಡದೆ ಹೋದರೆ ಪಕ್ಷಕ್ಕೆ ಉಳಿಗಾಲವಿಲ್ಲ ಎನ್ನುವುದು ಕಾರ್ಯಕರ್ತರ ಆಳಲು.

ಈಗಾಗಲೇ ಪಕ್ಷಕ್ಕೆ ನಿಷ್ಠಾವಂತರಾಗಿದ್ದ ನಾಯಕರು ಮತ್ತು ಕಾರ್ಯಕರ್ತರು ಆಸಕ್ತಿ ಕಳೆದುಕೊಂಡಿದ್ದು ಮೌನಕ್ಕೆ ಜಾರಿದ್ದಾರೆ. ಹಾಗೆಯೇ ಬಣಜಗಳದ ಲಾಭವನ್ನು ಪಡೆಯಲು ಕಾಂಗ್ರೆಸ್‌‍ ನಾಯಕರು ಹವಣಿಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ನಾಯಕರಿಂದಲೇ ಪಕ್ಷ ಹಾಳಾಗಿ ಹೋಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.

ಪಕ್ಷಕ್ಕೆ ಬಾವುಟ ಕಟ್ಟಲು, ಪೋಸ್ಟರ್‌‍ ಅಂಟಿಸಲು ಕಾರ್ಯಕರ್ತರೇ ಇಲ್ಲದ ಕಾಲದಿಂದ ಅಧಿಕಾರ ಹಿಡಿಯುವ ತನಕ ಬಿಜೆಪಿ ಪಕ್ಷ ಬೆಳೆದು ಬಂದ ಹಾದಿ ಮತ್ತು ಅದನ್ನು ಕಟ್ಟಿ ಬೆಳೆಸಿದ ನಾಯಕರ ಶ್ರಮವನ್ನು ಇವತ್ತು ಅಧಿಕಾರಕ್ಕಾಗಿ ಬಡಿದಾಡುತ್ತಿರುವ ನಾಯಕರು ಮೆಲುಕು ಹಾಕಿದರೆ ಬಹುಶಃ ಪಕ್ಷ ಕಟ್ಟುವುದೆಷ್ಟು ಕಷ್ಟ ಎಂಬುದು ಗೊತ್ತಾಗಿ ಬಿಡುತ್ತದೆ. ಈಗಿನ ಸ್ಥಿತಿಯಲ್ಲಿ ಬಿಜೆಪಿ ಪಕ್ಷ ಕೇಂದ್ರ ಮಾತ್ರವಲ್ಲದೆ ಹೆಚ್ಚಿನ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ. ಹೀಗಾಗಿ ಈಗಿನ ನಾಯಕರು ಆ ದಿನಗಳನ್ನು ಸರಿಸಲು ತಯಾರಿಲ್ಲ. ಮತ್ತು ಅದರ ಅಗತ್ಯವೂ ಅವರಿಗೆ ಇಲ್ಲದಾಗಿದೆ

ಇಂತಹ ಸಂದರ್ಭದಲ್ಲಿ ಪ್ರತಿಷ್ಠೆ, ಅಧಿಕಾರ ದಾಹ ಎಲ್ಲವನ್ನೂ ಬದಿಗಿಟ್ಟು ಪಕ್ಷವನ್ನು ಸಂಘಟಿಸುವ ಮನಸ್ಸುಗಳಿಗಿಂತ ಅಧಿಕಾರ ಅನುಭವಿಸುವ ಬಯಕೆ ಹೊಂದಿರುವವರೇ ಹೆಚ್ಚಾಗಿರುವ ಕಾರಣ ಮುಂದಿನ ದಿನಗಳಲ್ಲಿ ಈಗಿರುವ ನಾಯಕರ ಪೈಕಿ ಎಷ್ಟು ಮಂದಿ ಉಳಿದುಕೊಳ್ಳುತ್ತಾರೆ? ಎಷ್ಟು ಮಂದಿ ಬೇರೆ ಪಕ್ಷಗಳತ್ತ ಮುಖ ಮಾಡುತ್ತಾರೋ ಎಂಬುದನ್ನು ಹೇಳಲಾಗದು.

ಇವತ್ತು ಬಿಜೆಪಿ ಪಕ್ಷದಲ್ಲಿರುವ ನಾಯಕರ ಪೈಕಿ ಮೂಲ ಮತ್ತು ವಲಸಿಗರು ಎಂಬ ಎರಡು ವರ್ಗದ ನಾಯಕರಿದ್ದು, ಅವರಲ್ಲಿ ಮೂಲ ನಾಯಕರು ಪಕ್ಷಕ್ಕಾಗಿ ಬಡಿದಾಡಿದ್ದಾರೆ. ಕಷ್ಟದ ಕಾಲದಲ್ಲಿ ಪಕ್ಷದೊಂದಿಗೆ ನಿಂತಿದ್ದಾರೆ. ಇಂತಹವರ ನಡುವೆ ಕೆಲವರಂತೂ ಪಕ್ಷದಿಂದ ಯಾವುದೇ ಸ್ಥಾನಮಾನವೂ ಸಿಗದೆ ಕೇವಲ ಪಕ್ಷಕ್ಕಾಗಿ ದುಡಿಯುವುದರಲ್ಲೇ ತಮ್ಮ ಬದುಕನ್ನು ಕಳೆದಿದ್ದಾರೆ.

ಇನ್ನು ಮೂಲ ನಾಯಕರ ಪೈಕಿ ಕೆಲವರು ವಲಸಿಗರ ಮೇಲೆ ಹರಿಹಾಯುತ್ತಿರುವುದು ಎದ್ದು ಕಾಣಿಸುತ್ತಿದೆ. ಆದರೆ ಇಲ್ಲಿ ಮುಖ್ಯವಾಗಿ ತಿಳಿಯಬೇಕಾಗಿರುವ ವಿಚಾರವೇನೆಂದರೆ ಬೇರೆ ಪಕ್ಷಗಳನ್ನು ಬಿಟ್ಟು ವಲಸಿಗರು ಬಿಜೆಪಿಯನ್ನು ಸೇರದೇ ಹೋಗಿದ್ದರೆ, ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಪಡೆಯಲು ಸಾಧ್ಯವಾಗುತ್ತಿತ್ತಾ? ಎಂಬ ಪ್ರಶ್ನೆಯೂ ಮೂಡುತ್ತಿದೆ. 2019ರಲ್ಲಿ ಕಾಂಗ್ರೆಸ್‌‍ ಮತ್ತು ಜೆಡಿಎಸ್‌‍ ನಿಂದ ಶಾಸಕರು ಬಾರದೆ ಹೋಗಿದ್ದರೆ ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಲು ಸಾಧ್ಯವೇ ಆಗುತ್ತಿರಲಿಲ್ಲ.

ಆಪರೇಷನ್‌‍ ಕಮಲ ನಡೆಸಿ ಕಾಂಗ್ರೆಸ್‌‍ಗೆ ರಾಜೀನಾಮೆ ಕೊಡಿಸಿ ಬಿಜೆಪಿಗೆ ಕರೆಯಿಸಿಕೊಳ್ಳುವಾಗ ಇವತ್ತು ವಲಸಿಗ ನಾಯಕರ ಬಗ್ಗೆ ಮಾತನಾಡುವ ಮೂಲ ನಾಯಕರೆಲ್ಲರೂ ಏನಾಗಿದ್ದರು? ಅವತ್ತೇಕೆ ಅವರು ವಿರೋಧಿಸಲಿಲ್ಲ. ಇವತ್ತು ವಲಸೆ ನಾಯಕರು ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಅವರು ಹೋದರೆ ಹೋಗಲಿ ಎಂಬ ಮಾತುಗಳನ್ನಾಡುತ್ತಿದ್ದಾರೆ.

ಆದರೆ ಇವತ್ತು ಬಿಜೆಪಿಯಲ್ಲಿ ವಲಸಿಗರು ಮೂಲ ಎನ್ನುವುದಕ್ಕಿಂತ ಹೆಚ್ಚಾಗಿ ವಿಜಯೇಂದ್ರ ಮತ್ತು ಯತ್ನಾಳ್‌‍ ಬಣವಾಗಿ ಮಾರ್ಪಟ್ಟಿದ್ದು, ಇದರೊಂದಿಗೆ ತಟಸ್ಥ ಬಣವೂ ಸೇರಿಕೊಂಡಿದೆ. ಸದ್ಯಕ್ಕೆ ಒಂದೇ ಪಕ್ಷದಲ್ಲಿ ಮೂರು ತರಹದ ಮನಸ್ಥಿತಿಯ ನಾಯಕರು ಕಾಣಿಸಿಕೊಳ್ಳುತ್ತಿದ್ದಾರೆ. ಇಂತಹ ನಾಯಕರುಗಳನ್ನು ಒಂದೇ ವೇದಿಕೆಗೆ ತಂದು ಪಕ್ಷವನ್ನು ಒಮತದಿಂದ ನಡೆಸಲು ಸಾಧ್ಯವಾಗುತ್ತಾ? ಎಂಬುದು ಈಗಿರುವ ಪ್ರಶ್ನೆಯಾಗಿದೆ. ಇದುವರೆಗೆ ನಡೆದಿರುವ ವಿದ್ಯಮಾನಗಳನ್ನು ಗಮನಿಸಿದರೆ ಹೈಕಮಾಂಡ್‌‍ ಮಾಡಿದ ಎಲ್ಲ ಮಾತುಕತೆಗಳು ವಿಫಲವಾಗಿವೆ.

ಸದ್ಯದ ಬಿಜೆಪಿಯಲ್ಲಿನ ಜಟಾಪಟಿಗಳನ್ನು ಗಮನಿಸಿದ್ದೇ ಆದರೆ ರಾಜ್ಯಾಧ್ಯಕ್ಷ ಸ್ಥಾನದ ಪೈಪೋಟಿ ಪಕ್ಷವನ್ನು ಇಬ್ಭಾಗ ಮಾಡುವ ಹಂತಕ್ಕೆ ಹೋದರೂ ಅಚ್ಚರಿಯಿಲ್ಲ. ಎಲ್ಲವನ್ನು ಬಿಜೆಪಿ ಹೈಕಮಾಂಡ್‌‍ ಹೇಗೆ ನಿಭಾಯಿಸುತ್ತದೆ ಎಂಬುದೇ ಮಿಲಿಯನ್‌‍ ಡಾಲರ್‌‍ ಪ್ರಶ್ನೆಯಾಗಿದೆ.

Related Articles

Back to top button