ಆರೋಗ್ಯ

ಜನಸಾಮಾನ್ಯರ ಚಿಕಿತ್ಸಾಲಯ ಇನ್ನಷ್ಟು ಜನಸ್ನೇಹಿ ಆಗಲಿದೆ ನಮ್ಮ ಕ್ಲಿನಿಕ್​.. ರಾತ್ರಿ 8 ಗಂಟೆವರೆಗೂ ಓಪನ್​

Views: 0

ರಾಜ್ಯದಲ್ಲಿ ನಮ್ಮ ಕ್ಲಿನಿಕ್​ಗಳನ್ನು ಇನ್ನಷ್ಟು ಜನಸ್ನೇಹಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಸಮಯ ಬದಲಾವಣೆಗೆ ಮುಂದಾಗಿದೆ.

ನಮ್ಮ ಕ್ಲಿನಿಕ್ ಜನಸಾಮಾನ್ಯರಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಪ್ರಾರಂಭಿಸಲಾಗಿರುವ ನಮ್ಮ ಕ್ಲಿನಿಕ್​​ಗಳಿಗೆ ಜನಸ್ನೇಹಿ ಸ್ಪರ್ಶ ನೀಡಿದ್ದು, ಕ್ಲಿನಿಕ್​​ಗಳ ಸಮಯ ಬದಲಾವಣೆ ಮಾಡಿ ಸಂಜೆ ವೇಳೆಯೂ ಚಿಕಿತ್ಸೆ ಲಭಿಸುತ್ತದೆ.

ರಾಜ್ಯ ಸರ್ಕಾರ ಪ್ರಾಯೋಗಿಕವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಐದು ಕ್ಲಿನಿಕ್ ಗಳು ಕಾರ್ಮಿಕರು ಬೆಳಿಗ್ಗೆ ಬೇಗನೆ ಮತ್ತು ಸಂಜೆ ಕೆಲಸ ಬಿಟ್ಟ ಬಳಿಕ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಕಾರ್ಯನಿರ್ವಹಿಸಲಿದೆ.

ನಮ್ಮ ಕ್ಲಿನಿಕ್​ಗಳು ಎಂದರೇನು?

ಕೊಳಗೇರಿ ನಿವಾಸಿಗಳು, ದಿನಗೂಲಿ ಕಾರ್ಮಿಕರು ಮತ್ತು ಸಮಾಜದಲ್ಲಿರುವ ಇತರ ದುರ್ಬಲ ವರ್ಗಗಳಿಗೆ ಸುಲಭವಾಗಿ ವೈದ್ಯಕೀಯ ಸೇವೆ ದೊರಕಿಸಬೇಕು ಎನ್ನುವ ದೃಷ್ಟಿಯಿಂದ ನಮ್ಮ ಕ್ಲಿನಿಕ್​ಗಳು ಕಾರ್ಯಾರಂಭ ಮಾಡುತ್ತಿವೆ. ಪ್ರತಿ ನಮ್ಮ ಕ್ಲಿನಿಕ್​ 10ರಿಂದ 20 ಸಾವಿರ ಜನರಿಗೆ ಸೇವೆ ಒದಗಿಸಲಿದೆ.

ನಮ್ಮ ಕ್ಲಿನಿಕ್​ಗಳಲ್ಲಿ 12 ರೀತಿಯ ವೈದ್ಯಕೀಯ ಸೇವೆಗಳು ಲಭ್ಯವಿದೆ. ಪ್ರತಿ ನಮ್ಮ ಕ್ಲಿನಿಕ್​ನಲ್ಲಿಯೂ ವೈದ್ಯಕೀಯ ಅಧಿಕಾರಿ, ನರ್ಸ್, ಲ್ಯಾಬ್ ಟೆಕ್ನೀಷಿಯನ್ ಮತ್ತು ಗ್ರೂಪ್ ಡಿ ನೌಕರ ಇರುತ್ತಾರೆ. ಇಲ್ಲಿ ಲಭ್ಯವಿರುವ 12 ಸೇವೆಗಳಲ್ಲಿ ಗರ್ಭಿಣಿಯರ ತಪಾಸಣೆ ಮತ್ತು ಆರೈಕೆ, ನವಜಾತ ಶಿಶುಗಳ ಆರೈಕೆ, ಶಿಶುಗಳಿಗೆ ಚಿಕಿತ್ಸೆ, ಮಕ್ಕಳು ಮತ್ತು ಹದಿಹರೆಯದವರ ಆರೋಗ್ಯ ಕಾಳಜಿ, ಲಸಿಕೆ ಸೇವೆ, ಕುಟುಂಬ ನಿಯಂತ್ರಣ, ಸೋಂಕು ರೋಗಗಳ ನಿರ್ವಹಣೆ, ಸಕ್ಕೆ ಕಾಯಿಲೆ, ರಕ್ತದೊತ್ತಡ ನಿರ್ವಹಣೆ, ಸಣ್ಣಪುಟ್ಟ ಗಾಯಗಳಿಗೆ ಆರೈಕೆ, ಮರುಕಳಿಸುವ ಕಾಯಿಲೆಗಳು ಸೇರಿವೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಸಮಸ್ಯೆಗಳಿಗೆ ಸಂಬಂಧಿಸಿದ ಆಸ್ಪತ್ರೆಗಳಿಗೆ ರೆಫರಲ್ ಸೇವೆಗಳನ್ನೂ ಉಚಿತವಾಗಿ ಒದಗಿಸಲಾಗುವುದು.

ವಯೋವೃದ್ಧರ ಆರೈಕೆ, ತುರ್ತು ವೈದ್ಯಕೀಯ ಸೇವೆಗಳು, ಅರೋಗ್ಯ ತಪಾಸಣೆ ಮತ್ತು ಔಷಧಿಗಳನ್ನು ಸಂಪೂರ್ಣ ಉಚಿತವಾಗಿ ಒದಗಿಸಲಾಗುವುದು. 14 ಬಗೆಯ ಲ್ಯಾಬ್ ಟೆಸ್ಟ್​ಗಳು, ಟೆಲಿ ಕನ್ಸಲ್​ಟೇಶನ್ ಸೌಲಭ್ಯ, ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಲು ಸಲಹೆಗಳು ಉಚಿತವಾಗಿ ದೊರೆಯುತ್ತವೆ. ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ನಮ್ಮ ಕ್ಲಿನಿಕ್​ಗಳು ಕಾರ್ಯನಿರ್ವಹಿಸುತ್ತವೆ. ಜನವಸತಿಗಳಿಗೆ ಹತ್ತಿರದಲ್ಲಿ ಕ್ಲಿನಿಕ್​ಗಳನ್ನು ಆರಂಭಿಸುವುದರಿಂದ ಜನರಿಗೆ ಆರೋಗ್ಯ ಸೇವೆಗಳು ಸುಲಭವಾಗಿ ಸಿಗಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಸರ್ಕಾರಿ ಆಸ್ಪತ್ರೆಗಳ ಮೇಲಿರುವ ಒತ್ತಡವೂ ಕಡಿಮೆಯಾಗುತ್ತದೆ.

ಉಡುಪಿ, ಮಂಗಳೂರಿನಲ್ಲಿ ಎಲ್ಲೆಲ್ಲಿದೆ ನಮ್ಮ ಕ್ಲಿನಿಕ್?

ಮಂಗಳೂರು ಮಹಾನಗರ ಪಾಲಿಕೆಯ ಸೂಟರ್ ಪೇಟೆ, ಬೋಳಾರ, ಬಂದರು, ಪಚ್ಚನಾಡಿ, ಕೋಡಿಕಲ್, ಕುಂಜತ್ತಬೈಲ್, ಮೀನಕಳಿಯ, ಸುಳ್ಯದ ದುಗ್ಗಲಡ್ಕ, ಮೂಡುಬಿದರೆಯ ಗಂಟಾಲಕಟ್ಟೆ, ಉಳ್ಳಾಲದ ಕೆರೆಬೈಲು, ಕಡಬದ ಕೋಡಿಂಬಾಳ,ಪುತ್ತೂರಿನ ಬನ್ನೂರು,  ಉಡುಪಿಯ ಬೀಡಿನ ಗುಡ್ಡೆ, ಕಕ್ಕುಂಜೆ, ನಿಟ್ಟೂರು, ಕುಂದಾಪುರದ ಖಾರ್ಮಿಕೇರಿ, ಟಿಟಿ ರಸ್ತೆ, ಕಾರ್ಕಳದ ಮರೀನಾಪುರದಲ್ಲಿ ಇದೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇರುವ ಕ್ಲಿನಿಕ್​​ಗಳ ಪೈಕಿ ಶೇಕಡಾ 25ರಷ್ಟು ನಮ್ಮ ಕ್ಲಿನಿಕ್​ಗಳ ಸಮಯ ಬದಲಾವಣೆ ಮಾಡಲು ಆರೋಗ್ಯ ಸಚಿವರು ಆದೇಶಿಸಿದ್ದಾರೆ. ಸಂಜೆ 4.30ಕ್ಕೆ ಬಾಗಿಲು ಮುಚ್ಚುತ್ತಿದ್ದ ನಮ್ಮ ಕ್ಲಿನಿಕ್​ಗಳು ಇನ್ನು ಮುಂದೆ ರಾತ್ರಿ 8 ಗಂಟೆಯ ತನಕ ಚಿಕಿತ್ಸೆ ನೀಡಲಿವೆ.

ನಗರ ಪ್ರದೇಶಗಳಲ್ಲಿನ ಬಡವರು ಮತ್ತು ಕಡುಬಡವರಿಗೆ ಪ್ರಾಥಮಿಕ ಹಂತದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಇಲಾಖೆ ಹಲವಾರು ವಿಭಿನ್ನ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದೆ.

ರಾತ್ರಿ 8 ಗಂಟೆವರೆಗೆ ಕ್ಲಿನಿಕ್​ ಓಪನ್

ರಾಜ್ಯದಲ್ಲಿ 415 ನಮ್ಮ ಕ್ಲಿನಿಕ್​ಗಳಿದ್ದು, ಇವುಗಳಲ್ಲಿ ಶೇಕಡಾ 25ರಷ್ಟು ಕ್ಲಿನಿಕ್​ಗಳ ಸಮಯವನ್ನು ಬದಲಾವಣೆ ಮಾಡಲು ಆರೋಗ್ಯ ಸಚಿವರು ಇಲಾಖೆ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ. ಈ ಕ್ಲಿನಿಕ್​ಗಳು ಬೆಳಗ್ಗೆ 9 ಗಂಟೆಗೆ ಬಾಗಿಲು ತೆಗೆದು ಮಧ್ಯಾಹ್ನ 12.30ಕ್ಕೆ ಮುಚ್ಚಲ್ಪಡುತ್ತಿದ್ದವು. ಮಧ್ಯಾಹ್ನ ಊಟದ ಬಳಿಕ 2 ಗಂಟೆಗೆ ಬಾಗಿಲು ತೆರೆದು ಸಂಜೆ 4.30ಕ್ಕೆ ಬಂದ್ ಆಗುತ್ತಿದ್ದವು. ಈ ಸಮಯದಿಂದ ಹೆಚ್ಚಿನ ಜನರಿಗೆ ಅನುಕೂಲ ಆಗುತ್ತಿರಲಿಲ್ಲ. ಬಹಳಷ್ಟು ರೋಗಿಗಳು ಆಸ್ಪತ್ರೆಗೆ ಬಂದು ಬಾಗಿಲು ಮುಚ್ಚಿರುವುದನ್ನು ನೋಡಿಕೊಂಡು ವಾಪಸ್​​ ತೆರಳಬೇಕಾಗಿತ್ತು.

ಬೆಳಗ್ಗೆ 9 ಗಂಟೆಯ ಬದಲಿಗೆ ಅಪರಾಹ್ನ 12 ಗಂಟೆಗೆ ಪ್ರಾರಂಭಗೊಂಡು, ರಾತ್ರಿ 8 ಗಂಟೆಯ ತನಕ ನಮ್ಮ ಕ್ಲಿನಿಕ್​ಗಳು ತೆರೆದಿರಬೇಕು.

ಕೂಲಿ ಕಾರ್ಮಿಕರು ಕೆಲಸ ಮುಗಿಸಿಕೊಂಡು ಬಂದ ಬಳಿಕವೂ ಚಿಕಿತ್ಸೆ ದೊರೆಯುವಂತೆ ನಮ್ಮ ಕ್ಲಿನಿಕ್​ಗಳ ಸಮಯ ಬದಲಾವಣೆ ಮಾಡಲಾಗುತ್ತಿದೆ. ರಾತ್ರಿಯವರೆಗೂ ಕ್ಲಿನಿಕ್ ಕಾರ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

ಪ್ರಾಯೋಗಿಕ ಹಂತ : ನಮ್ಮ ಕ್ಲಿನಿಕ್​ಗಳು ಬೆಳಗ್ಗೆ 7 ಗಂಟೆಗೆ ತೆರೆಯಲಿದ್ದು, ಈ ಸಮಯದಲ್ಲಿ ಲ್ಯಾಬ್ ಟೆಕ್ನಿಷಿಯನ್​​ಗಳು ಮಾತ್ರ ಇರುತ್ತಾರೆ. ಅಪರಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ವೈದ್ಯರು ಹಾಗೂ ನರ್ಸ್ ಜನರಿಗೆ ಚಿಕಿತ್ಸೆ ನೀಡುವಂತೆ ಯೋಜನೆ ರೂಪಿಸಲಾಗಿದೆ.‌ ಸದ್ಯ ರಾಜ್ಯದಲ್ಲಿ ಶೇ. 25ರಷ್ಟು ಕ್ಲಿನಿಕ್​ಗಳಲ್ಲಿ ಪ್ರಾಯೋಗಿಕ ಹಂತದಲ್ಲಿ ಸಮಯ ಬದಲಾವಣೆ ಮಾಡಲಾಗುತ್ತಿದೆ.

ಹೆಚ್ಚಿನ ಜನರಿಗೆ ಆರೋಗ್ಯ ಸೇವೆ ದೊರಕಿಸಿಕೊಡಲು ಆರೋಗ್ಯ ಇಲಾಖೆ ಮತ್ತಷ್ಟು ಜನಸ್ನೇಹಿ ಯೋಜನೆ ಜಾರಿಗೆ ಹೆಜ್ಜೆ ಇಡಲು ಸಜ್ಜಾಗುತ್ತಿದೆ.

Related Articles

Back to top button