ಛತ್ತೀಸಗಢದಲ್ಲಿ ಎನ್‌ಕೌಂಟರ್: 27 ನಕ್ಸಲರ ಹತ್ಯೆ

Views: 37
ಕನ್ನಡ ಕರಾವಳಿ ಸುದ್ದಿ: ಛತ್ತೀಸ್‌ಗಢದ ನಾರಾಯಣಪುರ ಮತ್ತು ದಂತೇವಾಡ ಗಡಿಯಲ್ಲಿ ಭದ್ರತಾ ಪಡೆಗಳು ಇಂದು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 27 ನಕ್ಸಲರು ಹತ್ಯೆಯಾಗಿದ್ದಾರೆ. ಈ ಪೈಕಿ ನಕ್ಸಲರ ಪ್ರಮುಖ ನಾಯಕ ಬಸವ ರಾಜು ಎಂಬಾತನೂ ಸೇರಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಕ್ಸಲರ ವಿರುದ್ಧದ ಭದ್ರತಾ ಪಡೆಗಳ ಕಾರ್ಯಾಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಕೊಂಡಾಡಿದ್ದಾರೆ. ನಮ್ಮ ಭದ್ರತಾ ಪಡೆಗಳ ಯಶಸ್ಸಿನ ಬಗ್ಗೆ ಹೆಮ್ಮೆ ಇದೆ. ನಮ್ಮ ಸರ್ಕಾರ ನಕ್ಸಲ್ ಬೆದರಿಕೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಬದ್ಧತೆ ಹೊಂದಿದೆ ಎಂದು ಎಂದು ಮೋದಿ ತಿಳಿಸಿದ್ದಾರೆ.
ಅಬುಜ್ಮದ್‌ನ ದಟ್ಟ ಕಾಡುಗಳಲ್ಲಿ ಜಿಲ್ಲಾ ಮೀಸಲು ಪಡೆಯ ಸೈನಿಕರು ಮತ್ತು ನಕ್ಸಲರ ನಡುವೆ ಇಂದು ಬೆಳಗ್ಗೆಯಿಂದಲೇ ಭೀಕರ ಗುಂಡಿನ ಚಕಮಕಿ ಶುರುವಾಗಿತ್ತು. ನಾರಾಯಣಪುರ, ದಂತೇವಾಡ, ಬಿಜಾಪುರ ಮತ್ತು ಕೊಂಡಗಾಂವ್ ಜಿಲ್ಲೆಗಳ ಡಿಆರ್‌ಜಿ ಘಟಕಗಳು ಜಂಟಿಯಾಗಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. ಡಿಆರ್‌ಜಿಯ ಜಂಟಿ ತಂಡ ನಕ್ಸಲೀಯರ ಟಾಪ್ ಕಮಾಂಡರ್‌ಗಳನ್ನು ಸುತ್ತುವರೆದಿತ್ತು.
“ನಕ್ಸಲ್ ನಿಗ್ರಹ ಪಡೆ ಭಾರಿ ಯಶಸ್ಸು ಸಾಧಿಸಿವೆ. 26ಕ್ಕೂ ಹೆಚ್ಚು ನಕ್ಸಲರು ಸಾವನ್ನಪ್ಪಿದ್ದಾರೆ. ಇದರಲ್ಲಿ ದೊಡ್ಡ ದೊಡ್ಡ ನಕ್ಸಲ್ ನಾಯಕರು ಸಾವನ್ನಪ್ಪಿರುವ ಸಾಧ್ಯತೆಯಿದೆ. ಬಿಜಾಪುರದ ಸುಕ್ಮಾದ ನಾರಾಯಣಪುರದ ಅಬುಜ್ಮದ್ ಇಂದ್ರಾವತಿ ಪ್ರದೇಶದಲ್ಲಿ ಎನ್‌ಕೌಂಟರ್ ನಡೆಯಿತು. ಡಿಆರ್‌ಜಿ ಸೈನಿಕರು ಧೈರ್ಯ ಪ್ರದರ್ಶಿಸಿದ್ದಾರೆ. ಒಬ್ಬ ಸೈನಿಕ ಹುತಾತ್ಮರಾಗಿದ್ದಾರೆ. ಕಾರ್ಯಾಚರಣೆ ಬಹುತೇಕ ಮುಗಿದಿದೆ” ಎಂದು ಉಪ ಮುಖ್ಯಮಂತ್ರಿ ವಿಜಯ್ ಶರ್ಮಾ ಹೇಳಿದ್ದಾರೆ.