ಜನಮನ

ಗೋಕರ್ಣದ ಗುಹೆಯೊಳಗೆ ಎರಡು ಮಕ್ಕಳೊಂದಿಗೆ ರಷ್ಯಾದ ಮಹಿಳೆ ರಹಸ್ಯವಾಗಿ ವಾಸ!

Views: 341

ಕನ್ನಡ ಕರಾವಳಿ ಸುದ್ದಿ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ರಾಮತೀರ್ಥದ ಹತ್ತಿರದಲ್ಲಿರುವ ಗುಡ್ಡದ ಗುಹೆಯೊಳಗೆ ವಾಸವಿದ್ದ ರಷ್ಯನ್ ಮಹಿಳೆ ನಿನಾ ಕುಟಿನಾ (40) ಮತ್ತು ಆಕೆಯ ಇಬ್ಬರು ಪುತ್ರಿಯರನ್ನು ಗೋಕರ್ಣ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಗುಡ್ಡದ ಕಾಡಿನಲ್ಲಿರುವ ಗುಹೆಯಲ್ಲಿ ವಿದೇಶಿ ಮಹಿಳೆಯೊಬ್ಬರು ವಾರಗಳಿಂದ ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಿರುವ ಬಗ್ಗೆ ಸ್ಥಳೀಯರೊಬ್ಬರ ದೂರು ಆಧರಿಸಿ ಪರಿಶೀಲನೆ ನಡೆಸಲಾಗಿತ್ತು. ರಷ್ಯನ್ ಮಹಿಳೆಯು 6 ಮತ್ತು 4 ವರ್ಷದ ಇಬ್ಬರು ಮಕ್ಕಳೊಂದಿಗೆ ಇದ್ದಿದ್ದು ಗಮನಕ್ಕೆ ಬಂದಿತು. ಇದು ಅಪಾಯಕಾರಿ ತಾಣವಾಗಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಮಹಿಳೆ ಮತ್ತು ಮಕ್ಕಳನ್ನು ಕರೆತಂದು, ಕಾರವಾರದ ಸ್ವೀಕಾರ ಕೇಂದ್ರಕ್ಕೆ ಸೇರಿಸಲಾಗಿದೆ ಎಂದು ಗೋಕರ್ಣ ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ವೀಸಾ ಅವಧಿ 2017ರಲ್ಲಿಯೇ ಮುಗಿದಿದೆ. ಈಕೆಯನ್ನು ಕೂಲಂಕಷವಾಗಿ ವಿಚಾರಣೆ ನಡೆಸಲಾಗಿದೆ. ಕಳೆದ ಮೂರು ವಾರಗಳಿಂದ ಮಹಿಳೆ ಗೋಕರ್ಣದಲ್ಲಿ ಗುಹೆಯಲ್ಲಿ ವಾಸ ಇದ್ದುದಾಗಿ ತಿಳಿಸಿದ್ದಾರೆ. ಜುಲೈ 14 ರಂದು ಮಹಿಳೆ ಮತ್ತು ಮಕ್ಕಳನ್ನು ಬೆಂಗಳೂರಿನಲ್ಲಿರುವ ವಿದೇಶೀಯರ ವಿಭಾಗೀಯ ನೋಂದಣಾಧಿಕಾರಿ ಕಚೇರಿಗೆ (ಎಫ್‌ಆರ್‌ಆರ್‌ಒ) ಕರೆದೊಯ್ದು, ಮುಂದಿನ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಆಧ್ಯಾತ್ಮದ ಕಡೆಗೆ ಒಲವು ಇದ್ದ ಕಾರಣ ವೀಸಾ ಅವಧಿ ಮುಗಿದರೂ ಭಾರತ ಬಿಟ್ಟು ತೆರಳಿಲ್ಲ ಎಂದು ಮಹಿಳೆ ವಿಚಾರಣೆ ವೇಳೆ ತಿಳಿಸಿದ್ದಾರೆ. 2018ರಲ್ಲಿ ನೇಪಾಳಕ್ಕೆ ಸಾಗಿದ್ದ ಅವರು 2022ರಲ್ಲಿ ಅಲ್ಲಿಂದ ಮರಳಿ ದೇಶದ ವಿವಿಧೆಡೆ ವಾಸವಿದ್ದು, ಈಚೆಗೆ ಗೋಕರ್ಣಕ್ಕೆ ಬಂದಿದ್ದಾಗಿ ಹೇಳಿಕೊಂಡಿದ್ದಾರೆ.

 

Related Articles

Back to top button
error: Content is protected !!