ಕೋಟ ವಿವೇಕ ಪ.ಪೂ ಕಾಲೇಜು : ವಿಶಿಷ್ಟ ಸಾಧಕರಿಗೆ ಸಂಮ್ಮಾನ

Views: 1
ಉಡುಪಿ: ವಿವೇಕ ಪದವಿಪೂರ್ವ ಕಾಲೇಜಿನ 2022-2023 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿಜ್ಞಾನ 177 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಕಾಲೇಜಿನ ಸಭಾಂಗಣದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿವೇಕ ವಿದ್ಯಾಸಂಸ್ಥೆಯ ಹಿಂದಿನ ವಿದ್ಯಾರ್ಥಿ ಪ್ರಸ್ತುತ ಪ್ರೊಫೆಸರ್, ಅರಿವಳಿಕೆ ವಿಭಾಗದ ಮುಖ್ಯಸ್ಥರು ತುರ್ತು ವೈದ್ಯಕೀಯ ವಿಭಾಗ ಕೆ.ಎಂ.ಸಿ. ಮಂಗಳೂರು ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಡಾ| ಮಧುಸೂದನ ಉಪಾಧ್ಯ ಇವರು ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ನಿಖರವಾದ ಗುರಿಯನ್ನು ಹೊಂದಿ ಅದಕ್ಕೆ ಅನುಗುಣವಾಗಿ ಪ್ರಯತ್ನ ಮಾಡಬೇಕು. ಸಮಯ ಪರಿಪಾಲನೆ ಅತಿ ಅಗತ್ಯ. ಕರ್ತವ್ಯ ಬದ್ಧತೆ ಪ್ರಮಾಣಿಕತೆಯನ್ನು ಬೆಳೆಸಿಕೊಂಡು ಛಲದಿಂದ ಮುನ್ನುಗ್ಗುವ ಪ್ರವೃತ್ತಿಯನ್ನು ರೂಢಿಸಿಕೊಂಡಲ್ಲಿ ಉದ್ದೇಶಿತ ಗುರಿಯನ್ನು ತಲುಪಲು ಸಾಧ್ಯ. ಅಭ್ಯಾಸದ ಜೊತೆಗೆ ಉತ್ತಮ ಗುಣ, ಸಂಸ್ಕಾರಗಳನ್ನು ಪಡೆದು ಭವಿಷ್ಯದಲ್ಲಿ ಸಮಾಜಕ್ಕೆ ಬೇಕಾಗುವ ಆದರ್ಶ ವ್ಯಕ್ತಿಯಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಎ. ಪ್ರಭಾಕರ ಮಯ್ಯ, ಅಧ್ಯಕ್ಷರು, ಕೋಟ ವಿದ್ಯಾಸಂಘ, ಕೋಟ ಇವರು ಮಾತನಾಡಿ, ಈ ವರ್ಷದ ಶೈಕ್ಷಣಿಕ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ವಿಶೇಷ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳನ್ನು ಪ್ರಶಂಸಿಸಿ, ಮಾತನಾಡಿ, ಕಠಿಣವಾದ ಪರಿಶ್ರಮ, ಅಚಲವಾದ ಶ್ರದ್ಧೆ ವಿದ್ಯಾರ್ಥಿ ಗುರಿ ತಲುಪುವಲ್ಲಿ ಸಹಕರಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಅಧ್ಯಾಪಕರು ಬೋಧಿಸುವ ವಿಷಯವನ್ನು ಚೆನ್ನಾಗಿ ಅರಿತು ಒಳ್ಳೆಯ ಸಂಸ್ಕಾರವAತರಾಗಿ ಸಮಾಜಕ್ಕೆ ಆದರ್ಶಪ್ರಾಯರಾಗಬೇಕೆಂದು ತಿಳಿಸಿದರು.
ವಿದ್ಯಾಸಂಘದ ಕಾರ್ಯದರ್ಶಿ ಶ್ರೀ ಎಂ.ರಾಮದೇವ ಐತಾಳ, ಕೋಶಾಧಿಕಾರಿ ಶ್ರೀ ವಲೇರಿಯನ್ ಮೆನೇಜಸ್ ಇವರು ಶುಭಾಶಂಸನೆಗೈದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಗದೀಶ ನಾವಡರು ಪ್ರಸ್ತಾವನೆಯೊಂದಿಗೆ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಸಭೆಯಲ್ಲಿ ಕೋಟ ವಿದ್ಯಾಸಂಘದ ಸದಸ್ಯರು, ವಿವೇಕ ಹಿಂದಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ವಿಜ್ಞಾನ ವಿಭಾಗದಲ್ಲಿ ಸಾಧನೆಗೈದ ೧೭೭ ವಿದ್ಯಾರ್ಥಿಗಳನ್ನು ಹಾಗು ರಾಜ್ಯಕ್ಕೆ 6 ನೇ ಸ್ಥಾನ ಪಡೆದ ರಾಘವೇಂದ್ರ ಅಡಿಗ, ೯ನೇ ಸ್ಥಾನ ಗಳಿಸಿದ ವೈದೇಹಿ ವಿ. ಪೈ ಹಾಗು ರಾಜ್ಯಕ್ಕೆ 10ನೇ ಸ್ಥಾನ ಗಳಿಸಿದ ಶ್ರೀನಿಧಿ ಇವರನ್ನು ಪೋಷಕರ ಜೊತೆಯಲ್ಲಿ ಸಂಮ್ಮಾನಿಸಲಾಯಿತು.
ಮುಖ್ಯೋಪಾಧ್ಯಾಯರಾದ ಶ್ರೀ ಜಗದೀಶ ಹೊಳ್ಳ, ಹಾಗೇ ಮುಖ್ಯ ಸಹಶಿಕ್ಷಕರಾದ ಶ್ರೀ ವೆಂಕಟೇಶ ಉಡುಪ, ಶ್ರೀ ಅಚ್ಚುತ ಉಪಾಧ್ಯ ಉಪಸ್ಥಿತರಿದ್ದರು.
ವಿಶೇಷ ಸಾಧನೆಗೈದ ವಿದ್ಯಾರ್ಥಿಗಳ ಪಟ್ಟಿಯನ್ನು ರೇಖಾ ಸಾಯಿ, ಸೀತಾರಾಮ ಅಡಿಗ, ಸುಜಾತ ಕೆ.ವಿ., ಧನಶ್ರೀ ವಾಚಿಸಿದರು.
ಶಿವಪ್ರಸಾದ ಶೆಟ್ಟಿಗಾರ್ ಕಾರ್ಯಕ್ರಮ ನಿರ್ವಹಿಸಿದರು. ರವಿ ಕಾರಂತರು ವಂದಿಸಿದರು.