ಇತರೆ

ಯುದ್ಧದ ನಡುವೆ ರೋಗದ ಭೀತಿ!..ಎಂಬೋಲಾ ಜಾಗತಿಕ ವೈದ್ಯಕೀಯ ವಲಯ ತೀವ್ರ ನಿಗಾ..

Views: 22

ಕನ್ನಡ ಕರಾವಳಿ ಸುದ್ದಿ: ಎಂಬೋಲಾ ಸಾಂಕ್ರಾಮಿಕ ರೋಗವು ಭಾರಿ ಆತಂಕ ಸೃಷ್ಟಿಸಿದೆ. ಕಾಂಗೋದಲ್ಲಿ ಎಬೋಲಾ ಪತ್ತೆ ಹಚ್ಚುವ ಜಾಗೃತಿ ಮತ್ತು ತಪಾಸಣೆಯನ್ನು ತೀವ್ರಗೊಳಿಸಲಾಗಿದ್ದು, ಈವರೆಗೆ 900ಕ್ಕೂ ಹೆಚ್ಚು ಶಂಕಿತ ಪ್ರಕರಣಗಳು ವರದಿಯಾಗಿವೆ. ಇವುಗಳ ಪೈಕಿ 101 ಪ್ರಕರಣಗಳಲ್ಲಿ ಎಬೋಲಾ ವೈರಸ್ ಇರುವುದು ದೃಢಪಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಮಹಾನಿರ್ದೇಶಕರಾದ ಟೆಟ್ರೊಸ್ ಅಧಾನೊಮ್ ಗೆಬ್ರೆಯೆಸಸ್ ಆತಂಕಕಾರಿ ಮಾಹಿತಿ ನೀಡಿದ್ದಾರೆ

ಯುದ್ಧದ ನಡುವೆ ರೋಗದ ಭೀತಿ!

ಈ ಇಡೀ ಸಾಂಕ್ರಾಮಿಕ ರೋಗದ ಕೇಂದ್ರಬಿಂದುವಾಗಿರುವ ಕಾಂಗೋದ ‘ಇಟುರಿ’ ಪ್ರಾಂತ್ಯದಲ್ಲಿ ಸದ್ಯ ಸುಮಾರು 50 ಲಕ್ಷ ಜನ ವಾಸಿಸುತ್ತಿದ್ದಾರೆ. ಆದರೆ ದುರದೃಷ್ಟವಶಾತ್, ಈ ಪ್ರಾಂತ್ಯವು ಸದ್ಯ ಭೀಕರ ಆಂತರಿಕ ಸಶಸ್ತ್ರ ಸಂಘರ್ಷ ಮತ್ತು ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ನಾಲ್ಕರಲ್ಲಿ ಒಬ್ಬರಿಗೆ ತುರ್ತು ಮಾನವೀಯ ನೆರವಿನ ಅಗತ್ಯವಿದ್ದು, ಪ್ರತಿ ಐವರಲ್ಲಿ ಒಬ್ಬರು ನಿರಾಶ್ರಿತರಾಗಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಕಳವಳ ವ್ಯಕ್ತಪಡಿಸಿರುವ ಡಾ. ಟೆಟ್ರೊಸ್, “ಪ್ರಾಂತ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಸಾಮಾನ್ಯ ಜನರು ಹಾಗೂ ಆರೋಗ್ಯ ಕಾರ್ಯಕರ್ತರು ಪ್ರಾಣಭಯದಿಂದ ವಲಸೆ ಹೋಗುತ್ತಿದ್ದಾರೆ. ಇದು ಎಬೋಲಾ ರೋಗಿಗಳ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚುವ (ಕಾಂಟ್ಯಾಕ್ಟ್ ಟ್ರೇಸಿಂಗ್) ಮತ್ತು ರೋಗಿಗಳಿಗೆ ಆರಂಭಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ನೀಡುವ ಆರೋಗ್ಯ ಇಲಾಖೆಯ ಪ್ರಯತ್ನಗಳಿಗೆ ಭಾರಿ ಹಿನ್ನಡೆ ಉಂಟುಮಾಡಿದೆ. ಜೊತೆಗೆ ನಿರಂತರ ಅಸುರಕ್ಷತೆ ಮತ್ತು ಭಯದ ವಾತಾವರಣವು ಸ್ಥಳೀಯ ಸಮುದಾಯಗಳಲ್ಲಿ ತೀವ್ರ ಅಪನಂಬಿಕೆಯನ್ನು ಮೂಡಿಸುತ್ತಿದೆ” ಎಂದು ಹೇಳಿದ್ದಾರೆ.

ರೋಗ ಹರಡುವಿಕೆ: ಈ ವೈರಸ್ ಮೊದಲು ಕಾಡು ಪ್ರಾಣಿಗಳಾದ ಬಾವಲಿಗಳು, ಮುಳ್ಳುಹಂದಿ ಮತ್ತು ಕೋತಿಗಳಿಂದ ಮನುಷ್ಯರಿಗೆ ಹರಡುತ್ತದೆ. ನಂತರ ಸೋಂಕಿತ ವ್ಯಕ್ತಿಯ ರಕ್ತ ಸ್ರವಿಸುವಿಕೆ, ಅಂಗಾಂಗಗಳು ಅಥವಾ ಇತರೆ ದೈಹಿಕ ದ್ರವಗಳ ನೇರ ಸಂಪರ್ಕದ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಸೋಂಕಿತರು ಬಳಸಿದ ಬಟ್ಟೆ ಅಥವಾ ಹಾಸಿಗೆಯನ್ನು ಮುಟ್ಟುವುದರಿಂದಲೂ ಇದು ಹರಡಬಹುದು.

ಮರಣ ಪ್ರಮಾಣ: ಈ ಕಾಯಿಲೆಯಲ್ಲಿ ಮರಣ ಪ್ರಮಾಣವು ಸರಾಸರಿ ಶೇಕಡಾ 50 ರಷ್ಟಿರುತ್ತದೆ. ಹಿಂದಿನ ಇತಿಹಾಸವನ್ನು ಗಮನಿಸಿದರೆ ಒಟ್ಟು ಸೋಂಕಿತರಲ್ಲಿ ಶೇ. 25 ರಿಂದ ಶೇ. 90 ರಷ್ಟು ಜನ ಸಾವನ್ನಪ್ಪಿರುವ ಉದಾಹರಣೆಗಳಿವೆ.

1976 ರಲ್ಲಿ ಮೊದಲ ಬಾರಿಗೆ ಪತ್ತೆಯಾದ ಈ ವೈರಸ್, ಆಫ್ರಿಕಾದ ಉಷ್ಣವಲಯದ ಮಳೆಕಾಡುಗಳ ಬಳಿಯ ಹಳ್ಳಿಗಳಲ್ಲಿ ಕಾಣಿಸಿಕೊಂಡಿತ್ತು. ಆದರೆ 2014-2016 ರ ಅವಧಿಯಲ್ಲಿ ಪಶ್ಚಿಮ ಆಫ್ರಿಕಾದ ಗಿನಿ, ಸಿಯೆರಾ ಲಿಯೋನ್ ಮತ್ತು ಲೈಬೀರಿಯಾ ದೇಶಗಳಲ್ಲಿ ಹರಡಿದ್ದ ಎಬೋಲಾ ಸಾಂಕ್ರಾಮಿಕವು ಇತಿಹಾಸದಲ್ಲೇ ಅತ್ಯಂತ ದೊಡ್ಡದಾದ ಹಾಗೂ ಸಂಕೀರ್ಣವಾದ ಬಿಕ್ಕಟ್ಟಾಗಿತ್ತು. ಪ್ರಸ್ತುತ ಕಾಂಗೋದಲ್ಲಿ ಪರಿಸ್ಥಿತಿ ಹದಗೆಡುತ್ತಿರುವುದರಿಂದ ಜಾಗತಿಕ ವೈದ್ಯಕೀಯ ವಲಯ ತೀವ್ರ ನಿಗಾ ವಹಿಸಿದೆ,

Related Articles

Back to top button
error: Content is protected !!