ಕುಂದಾಪುರ: ಅಂತರಾಷ್ಟ್ರೀಯ ಕ್ರೀಡಾಪಟು ಜಯಾನಂದ ಖಾರ್ವಿ ನಿಧನ

Views: 369
ಕನ್ನಡ ಕರಾವಳಿ ಸುದ್ದಿ:ಕುಂದಾಪುರ: ಜಯಾನಂದ ಖಾರ್ವಿ (64) ಇಂದು ಬೆಳಿಗ್ಗೆ ಹೃದಯಾಘಾತದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರ ಪತ್ನಿ ಶ್ರೀಮತಿ ಶಾರದಾ ಪುತ್ರ ಭರತ್ ನಿಶಾನ್ ಪುತ್ರಿ ನಿಹಾರಿಕಾಳನ್ನು ಅಗಲಿದ್ದಾರೆ.
ಕುಂದಾಪುರ ಭಂಡಾರಕಾರ್ಸ್ ಕಾಲೇಜುನಲ್ಲಿ ಪದವಿ ಪಡೆದು ವಾಲಿಬಾಲ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ತಾನು ಹುಟ್ಟಿದ ಊರಿಗೆ ತನ್ನ ಸಮಾಜದ ಕೀರ್ತಿಯನ್ನು ತಂದವರು.
ವೃತ್ತಿಯಲ್ಲಿ ಗುತ್ತಿಗೆದಾರರಾಗಿ, ಕೊಂಕಣಿ ಖಾರ್ವಿ ಸಮಾಜದ ಪ್ರತಿಷ್ಠಿತ ಶ್ರೀ ಮಹಾಕಾಳಿ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.ವಿದ್ಯಾರಂಗ ಮಿತ್ರ ಮಂಡಳಿ(ರಿ), ವಿದ್ಯಾನಿಧಿ ಯೋಜನೆಯ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ವಿದ್ಯಾರ್ಥಿಗಳಿಗೆ ವಿನೂತನವಾದ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ ಕಾರ್ಯಾಗಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿಕೊಂಡು ಬಂದವರು.
ಧಾರ್ಮಿಕ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು ಕುಂದೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ, ನಂದಿಕೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರಾಗಿ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಸಕ್ರೀಯವಾಗಿ ಇತ್ತೀಚೆಗೆ ನಡೆದ ಮಹಾಗಂಗಾರತಿಯ ಜವಾಬ್ದಾರಿಯನ್ನು ಸಮರ್ಪಕವಾಗಿ ನಡೆಸಿ ಧಾರ್ಮಿಕ ಸೇವೆ ಸಲ್ಲಿಸಿಕೊಂಡು ಬಂದಿದ್ದರು.
ಕುಂದಾಪುರ ಕೊಂಕಣಿ ಖಾರ್ವಿ ಸಮಾಜದ ಹೋಳಿ ಹಬ್ಬದ ಸಂದರ್ಭದಲ್ಲಿ ಶ್ರೀ ಮಹಾಕಾಳಿ ಮಾತೆಯ ಬಣ್ಣದ ಪೂಜೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ವಿಧಾನವನ್ನು ಆಳವಡಿಸಿ ಇತರೆ ಸಮಾಜಕ್ಕೆ ಪರಿಚಯಿಸಿದ ಜಯಾನಂದ ಖಾರ್ವಿ ಕೊಂಕಣಿ ಖಾರ್ವಿ ಸಮಾಜದ ಅನರ್ಘ್ಯ ರತ್ನವೇ ಆಗಿದ್ದಾರೆ.
ಕುಂದಾಪುರ ಕೊಂಕಣಿ ಖಾರ್ವಿ ಸಮಾಜದ ಓರ್ವ ಅಂತರಾಷ್ಟ್ರೀಯ ಕ್ರೀಡಾಪಟು, ಸಾಮಾಜಿಕ ಶೈಕ್ಷಣಿಕ ಧಾರ್ಮಿಕ ಸಂಸ್ಥೆಯಲ್ಲಿ ದುಡಿದ ಓರ್ವ ನಿಷ್ಠಾವಂತ ಸಮಾಜದ ನಾಯಕರಾಗಿದ್ದಾರೆ.