ರಾಜಕೀಯ

ಕರ ಸೇವಕರ ಬಂಧನ ಕೈ-ಕಮಲ ಜಟಾಪಟಿ : ನಾಳೆ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ 

Views: 38

 

ಹಿಂದೆ ಅಯೋಧ್ಯೆಯ ಶ್ರೀರಾಮ ಮಂದಿರಕ್ಕಾಗಿ ನಡೆದಿದ್ದ ಹೋರಾಟ ಸಂದರ್ಭದಲ್ಲಿ ಕರ ಸೇವೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಹಿಂದೂ ಕಾರ್ಯಕರ್ತರ ಬಂಧನ ವಿಚಾರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ರಾಜ್ಯಸರ್ಕಾರ ಬಂಧನವನ್ನು ಸಮರ್ಥಿಸಿಕೊಂಡಿದ್ದರೆ, ಬಿಜೆಪಿ ಬಂಧನವನ್ನು ಖಂಡಿಸಿದೆ. ಹಿಂದೂ ಕಾರ್ಯಕರ್ತರ ಬಂಧನ ಈಗ ಕಾಂಗ್ರೆಸ್-ಬಿಜೆಪಿ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ.

ಹಳೆಯ ಪ್ರಕರಣ ಎಂದು ಬಂಧನ ಮಾಡದೆ ಸುಮ್ಮನಿರಬೇಕಿತ್ತಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸುವ ಮೂಲಕ ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ಸರ್ಕಾರದ ನಡೆಯ ವಿರುದ್ಧ ಆಕ್ರೋಶ ಹೊರ ಹಾಕಿರುವ ಬಿಜೆಪಿ ನಾಳೆ ಹಿಂದೂ ಕಾರ್ಯಕರ್ತರ ಬಂಧನ ವಿರೋಧಿಸಿ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಹೇಳಿದೆ.

ರಾಮಮಂದಿರ ಉದ್ಘಾಟಣೆಗೆ ದಿನಗಣನೆ ಆರಂಭವಾಗಿರುವಾಗಲೇ ಇಬ್ಬರು ಕರ ಸೇವಕರ ಬಂಧನ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡು ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಕೋಮು ಬಣ್ಣ ಬೇಡ ಎಂದು ಹೇಳಿದ್ದಾರೆ.

ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಹಿಂದೂ ಕಾರ್ಯಕರ್ತರು ಸಂಭ್ರಮದಲ್ಲಿರುವ ಸಂದರ್ಭದಲ್ಲಿ ಬಂಧನ ಅಗತ್ಯವಿತ್ತೆ. ಸರ್ಕಾರದ ಈ ನಡೆದ ಖಂಡನೀಯ ಎಂದು ಕಿಡಿಕಾರಿದ್ದಾರೆ.31 ವರ್ಷಗಳ ಹಿಂದೆ ಅಂದರೆ 1992ರ ಡಿ.5 ರಂದು ಶ್ರೀರಾಮಮಂದಿರಕ್ಕಾಗಿ ನಡೆದಿದ್ದ ಹೋರಾಟದಲ್ಲಿ ಪಾಲ್ಗೊಂಡಿದ್ದ ರಾಜು, ಧರ್ಮದಾಸ್ ಎಂಬುವರನ್ನು ಡಿ. 10 ರಂದು ಹಾಗೂ 2 ದಿನದ ಹಿಂದೆ ಶ್ರೀಕಾಂತ್ ಪೂಜಾರಿ ಎಂಬುವರನ್ನು ಪೊಲೀಸರು ಬಂಧಿಸಿದ್ದರು. 31 ವರ್ಷದ ಬಳಿಕ ಹಳೆ ಪ್ರಕರಣಕ್ಕೆ ಮರು ಜೀವ ನೀಡಿ ಇವರಿಬ್ಬರ ಬಂಧನವಾಗಿತ್ತು. ಇದು ಈಗ ರಾಜಕೀಯ ಬಣ್ಣ ಪಡೆದುಕೊಂಡು ಬಿಜೆಪಿ-ಕಾಂಗ್ರೆಸ್ ನಡುವೆ ಜಟಾಪಟಿಗೆ ಅನುವು ಮಾಡಿಕೊಟ್ಟಿದೆ.

ನಾಳೆ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ಹಳೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತರನ್ನು ಬಂಧಿಸಿರುವುದನ್ನು ವಿರೋಧಿಸಿ ಬಿಜೆಪಿ ನಾಳೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇ ಪ್ರಕರಣದಲ್ಲಿ ಹುಬ್ಬಳ್ಳಿಯಲ್ಲಿ ಹಿಂದೂ ಕಾರ್ಯಕರ್ತರನ್ನು ಬಂಧಿಸಿರುವುದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ. ರಾಜ್ಯ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಎಂಬುದನ್ನು ಪದೇ ಪದೇ ನೆನಪು ಮಾಡುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಅಯೋಧ್ಯೆಯಲ್ಲಿ ರಾಜ್ಯದ ಅರುಣ್‌ಯೋಗರಾಜ್ ಬಾಲ ರಾಮನ ಶಿಲೆ ಕೆತ್ತಿದ್ದಾರೆ ಎಂದು ಸಂತೋಷ ಪಟ್ಟಿದ್ದೆವು. ಇಂತಹ ಸಂದರ್ಭದಲ್ಲಿ ಇಡೀ ದೇಶವೇ ಸಂಭ್ರಮದಲ್ಲಿದ್ದಾಗ ರಾಮಭಕ್ತನ ಬಂಧನ ಅಗತ್ಯವಿತ್ತೆ, ಈ ಸರ್ಕಾರಕ್ಕೆ ಧೈರ್ಯ ಎಷ್ಟಿರಬೇಕು ಎಂದು ಕಿಡಿಕಾರಿದ ಅವರು, ಇವರ ಉದ್ದೇಶ ಏನು, ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆಗೆ ಭಂಗ ತರುವ ಕೆಲಸಕ್ಕೆ ಮುಖ್ಯಮಂತ್ರಿಗಳು ಕೈಹಾಕಿದ್ದಾರೆ ಎಂದರು.ಈ ಘಟನೆಯನ್ನು ಕೇವಲ ಕರ್ನಾಟಕ ಮಾತ್ರವಲ್ಲ, ಇಡೀ ದೇಶವೇ ನೋಡುತ್ತಿದೆ. ಜಗತ್ತಿನಲ್ಲಿ ಹಿಂದೂ ಕಾರ್ಯಕರ್ತರು ಹರ್ಷದಿಂದ ಇರುವಾಗ ಕಾಂಗ್ರೆಸ್ ಸರ್ಕಾರ ಈ ಕೆಲಸಕ್ಕೆ ಕೈ ಹಾಕಿದೆ. ಇದನ್ನು ಬಿಜೆಪಿ ಮಾತ್ರವಲ್ಲ, ಪಕ್ಷಾತೀತವಾಗಿ ಎಲ್ಲರೂ ಖಂಡಿಸುತ್ತಾರೆ. ಮುಂದೆ ನಡೆಯುವ ಘಟನೆಗೆ ಗೃಹ ಸಚಿವರೇ ಕಾರಣವಾಗಲಿದ್ದಾರೆ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.ನಾಳೆ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಬಿಜೆಪಿ ಹೋರಾಟ ಮಾಡಲಿದೆ. ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್‌ನಲ್ಲೂ ಪ್ರತಿಭಟನೆ ನಡೆಯಲಿದೆ ಎಂದು ಅವರು ಹೇಳಿದರು.

Related Articles

Back to top button