ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕರಿಂದ ಬಲವಂತವಾಗಿ ರಾಜಿನಾಮೆ ಪಡೆದು ಕೆಲಸದಿಂದ ವಜಾ

Views: 145
ಕನ್ನಡ ಕರಾವಳಿ ಸುದ್ದಿ: ಬೆಂಗಳೂರು ರಾಜಧಾನಿಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಕನ್ನಡಿಗ ಉಪನ್ಯಾಸಕನ ಮೇಲೆ ದಬ್ಬಾಳಿಕೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಆರ್‌ವಿ ಲರ್ನಿಂಗ್ ಹಬ್ ಸಂಸ್ಥೆಯಲ್ಲಿ ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ವಜಾಮಾಡಲಾಗಿದೆ. ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿಯೊಬ್ಬ, ಕನ್ನಡದಲ್ಲಿ ಪ್ರಶ್ನೆ ಕೇಳಿದ್ದಾನೆ ಹೀಗಾಗಿ ಕನ್ನಡದಲ್ಲೇ ಉಪನ್ಯಾಸಕ ಉತ್ತರಿಸಿದರಂತೆ. ಆದರೆ, ಮತ್ತೊಬ್ಬ ವಿದ್ಯಾರ್ಥಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ನೀವು ಕನ್ನಡದಲ್ಲಿ ಪಾಠ ಮಾಡಬೇಡಿ, ಇಂಗ್ಲಿಷ್ ನಲ್ಲಿಯೇ ಮಾತನಾಡಿ, ನಮಗೆ ಕನ್ನಡ ಬರಲ್ಲ ಎಂದು ವಾದ ಮಾಡಿದ್ದಾನೆ. ಈ ವೇಳೆ ಕನ್ನಡ ಈ ನೆಲದ ಭಾಷೆ, ಕ್ರಿಮಿನಲ್ ಭಾಷೆ ಅಲ್ಲ ಎಂದು ಉಪನ್ಯಾಸಕ ವಿದ್ಯಾರ್ಥಿಗೆ ಬುದ್ದಿವಾದ ಹೇಳಿದ್ದಾರೆ. ಆದರೆ, ನನಗೆ ಕನ್ನಡ ಬರಲ್ಲ, ಇಂಗ್ಲಿಷ್ ನಲ್ಲೇ ಪಾಠ ಮಾಡಬೇಕು ಅಂತ ಮತ್ತೆ ವಿದ್ಯಾರ್ಥಿ ಪಟ್ಟುಹಿಡಿದಿದ್ದಾನೆ.
ಮರುದಿನ ಉಪನ್ಯಾಸಕರು ಕಾಲೇಜಿಗೆ ಹೋಗಿದ್ದಾರೆ. ಆ ವೇಳೆ ಪ್ರಾಂಶುಪಾಲರು ಕರೆದು ರಾಜೀನಾಮೆಗೆ ಆಗ್ರಹಿಸಿದರು. ಒಂದು ವೇಳೆ ರಾಜೀನಾಮೆಗೆ ಸಹಿ ಹಾಕದಿದ್ದರೆ ಕಾಲೇಜಿನ ಇನ್ನೊಂದು ಶಾಖೆಯಲ್ಲಿರುವ ನಿಮ್ಮ ಮಗಳ ಸರ್ಟಿಫಿಕೇಟ್ ಕೊಡಲ್ಲ ಎಂದು ಬೆದರಿಸಿ, ರಾಜೀನಾಮೆ ಪಡೆದಿದ್ದಾರೆ ಎಂದು ಉಪನ್ಯಾಸಕ ಆರೋಪಿಸಿದ್ದಾರೆ.
ಈ ಬಗ್ಗೆ ವಿಡಿಯೊ ಹಂಚಿಕೊಂಡಿರುವ ಉಪನ್ಯಾಸಕ, ಕನ್ನಡ ನಾಡಿನಲ್ಲಿ ಕನ್ನಡ ಮಾತನಾಡಿ ಕೆಲಸ ಹೋಗುವಂತಹ ನನ್ನಂತಹ ಸ್ಥಿತಿ ಯಾರಿಗೂ ಬರದಿರಲಿ ಎಂದು ಅಳಲು ತೋಡಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕಾಲೇಜು ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.