ಕನ್ನಡದ ಖ್ಯಾತ ನಟ, ರಂಗಕರ್ಮಿ ಪ್ರಕಾಶ್ ಹೆಗ್ಗೋಡು ನಿಧನ
ಯಶ್ ಅವರ ಜತೆ ʼರಾಜಾಹುಲಿʼ, ಶಿವ ರಾಜ್‌ಕುಮಾರ್ ಅವರೊಂದಿಗೆ ʼಸಂತʼ, ʼಭಾಗ್ಯದ ಬಳೆಗಾರʼ, ಉಪೇಂದ್ರ ಅವರೊಂದಿಗೆ ʼಕಲ್ಪನಾ 2ʼ ಜತೆಗೆ ʼವೀರುʼ, ʼಮಾಡ್ರರ್ನ್ ಮಹಾಭಾರತʼ ಮುಂತಾದ ಸಿನಿಮಾಗಳಲ್ಲಿ ಖಳನಟನಾಗಿ, ಪೋಷಕ ನಟನಾಗಿ ಮಿಂಚಿದ್ದರು.

Views: 80
ಬೆಂಗಳೂರು: ಕನ್ನಡದ ಖ್ಯಾತ ನಟ, ಹಿರಿಯ ರಂಗಕರ್ಮಿ ಪ್ರಕಾಶ್ ಹೆಗ್ಗೋಡು ಅವರು ಶನಿವಾರ ಅನಾರೋಗ್ಯದಿಂದ ನಿಧನರಾಗಿದ್ದು, ಅವರಿಗೆ 58 ವರ್ಷ ವಯಸ್ಸಾಗಿತ್ತು.
ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಪ್ರಕಾಶ್ ಹೆಗ್ಗೋಡು ಅವರನ್ನು ಈ ಹಿಂದೆ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಕನ್ನಡದ 35ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಪ್ರಕಾಶ್ ಹೆಗ್ಗೋಡು ಅವರು ಯೇಸುಪ್ರಕಾಶ್ ಕಲ್ಲುಕೊಪ್ಪ ಎಂದೇ ಖ್ಯಾತಿಗಳಿಸಿದ್ದರು. ಸಿನಿಮಾ, ರಂಗಭೂಮಿಗಳಲ್ಲಿ ಸಕ್ರಿಯರಾಗಿದ್ದ ಅವರು ಪರಿಸರ ಹೋರಾಟದಲ್ಲಿಯೂ ಮುಂಚೂಣಿಯಲ್ಲಿದ್ದರು.
ಯಶ್ ಅವರ ಜತೆ ʼರಾಜಾಹುಲಿʼ, ಶಿವ ರಾಜ್‌ಕುಮಾರ್ ಅವರೊಂದಿಗೆ ʼಸಂತʼ, ʼಭಾಗ್ಯದ ಬಳೆಗಾರʼ, ಉಪೇಂದ್ರ ಅವರೊಂದಿಗೆ ʼಕಲ್ಪನಾ 2ʼ ಜತೆಗೆ ʼವೀರುʼ, ʼಮಾಡ್ರರ್ನ್ ಮಹಾಭಾರತʼ ಮುಂತಾದ ಸಿನಿಮಾಗಳಲ್ಲಿ ಖಳನಟನಾಗಿ, ಪೋಷಕ ನಟನಾಗಿ ಮಿಂಚಿದ್ದರು.
ಇತ್ತೀಚೆಗೆ ಹೊಸನಗರದ ಸಾರಾ ಸಂಸ್ಥೆಯ ಜತೆ ಗುರುತಿಸಿಕೊಂಡಿದ್ದ ಅವರು ಕೆರೆ ಪುನರುಜ್ಜೀವನ ಮೊದಲಾದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಜತೆಗೆ ಸಾರಾ ಸಂಸ್ಥೆಯ ಖಜಾಂಚಿಯಾಗಿಯೂ ಸಕ್ರಿಯರಾಗಿದ್ದರು. ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.
ಪ್ರಕಾಶ್ ಹೆಗ್ಗೋಡು ಅವರು ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ ಪುರಪ್ಪೆಮನೆಯವರು.ಇಂದು (ಮಾರ್ಚ್ 31) ಅವರ ಅಂತಿಮ ದರ್ಶನಕ್ಕೆ ಅವರ ಸ್ವಗೃಹವಾದ ಪುರಪ್ಪೆಮನೆಯಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. ಆತ್ಮೀಯರು, ರಂಗಕರ್ಮಿಗಳು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆಯಬಹುದು ಎಂದು ತಿಳಿಸಿವೆ.