ಕದನ ವಿರಾಮ ಘೋಷಿಸಲು ಟ್ರಂಪ್ ಯಾರು?: ಸಚಿವ ಪ್ರಿಯಾಂಕ್ ಖರ್ಗೆ

Views: 59
ಕನ್ನಡ ಕರಾವಳಿ ಸುದ್ದಿ: ಭಯೋತ್ಪಾದಕ ತಾಣಗಳನ್ನು ನಮ್ಮ ಸೈನಿಕರು ಧ್ವಂಸ ಮಾಡಿದ್ದಾರೆ. ಆದರೆ, ಕೇಂದ್ರ ಸರಕಾರದ ಕದನ ವಿರಾಮದ ನಿರ್ಧಾರದಿಂದ ಸೇನೆಗೆ ಹಾಗೂ ಭಾರತೀಯ ಸಾಮಾನ್ಯ ನಾಗರಿಕರಿಗೆ ನಿರಾಸೆ ತಂದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಪಾಕಿಸ್ತಾನ ನಂಬಿಕೆಗೆ ಅರ್ಹ ರಾಷ್ಟ್ರವಲ್ಲ, ನಮ್ಮ ನಾಗರಿಕರ ಮೇಲೆ ದಾಳಿ ಮಾಡಿದ ಭಯೋತ್ಪಾದಕರ ನೆಲೆಗಳ ಮೇಲೆ ಸೈನಿಕರು ದಾಳಿ ಮಾಡಿ ನಾಶ ಮಾಡಿದ್ದಾರೆ. ಆದರೆ, ಕದನ ವಿರಾಮ ಘೋಷಿಸಲಾಗಿದೆ.
ಯುದ್ಧ ವಿರಾಮ ಯಾರು ಘೋಷಿಸಬೇಕು.? ಯಾವ ಮಾನದಂಡಗಳ ಅಡಿಯಲ್ಲಿ ಮಾಡಲಾಗಿದೆ.? ಕದನ ವಿರಾಮ ಉಲ್ಲಂಘನೆ ಮಾಡಿದರೆ ಯಾವ ಕ್ರಮ ಕೈಗೊಳ್ಳಬೇಕು.? ಎನ್ನುವ ಬಗ್ಗೆ ಸರಕಾರ ಅಧಿವೇಶನ ಕರೆದು ರಾಷ್ಟ್ರದ ಜನರಿಗೆ ವಾಸ್ತವ ತಿಳಿಸಲಿ ಎಂದು ಒತ್ತಾಯಿಸಿದರು.
ವ್ಯಕ್ತಿ ಪೂಜೆ ಬಿಟ್ಟು, ದೇಶದ ಕಡೆಗೆ ಗಮನ ಕೊಡಿ
ಮಾಧ್ಯಮಗಳಲ್ಲಿ ಯುದ್ಧದ ರಂಜನೀಯ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದಕ್ಕೆ ಆಸಮಾಧಾನ ವ್ಯಕ್ತಪಡಿಸಿದ ಖರ್ಗೆ, ದೇಶದ ಹಿತಾಸಕ್ತಿ ಹಾಗೂ ವಾಸ್ತವಾಂಶಗಳಿಗಿಂತ ವ್ಯಕ್ತಿಯ ವೈಭವೀಕರಣವಾಗುತ್ತಿದೆ. ಕೇವಲ ಮೀಡಿಯಾ ಮ್ಯಾನೇಜ್ ಮೆಂಟ್ ಮಾಡುವುದರಲ್ಲೇ ಸಮಯ ಹಾಳಾಗತ್ತಿದೆ. ಮಧ್ಯಮ ಪ್ಯಾನೆಲ್ ಚರ್ಚೆಯಲ್ಲಿ ಬಿಜೆಪಿಯ ಬಾಡಿಗೆ ಭಾಷಣಕಾರರು ತಪ್ಪು ಮಾಹಿತಿಯನ್ನೇ ಹೇಳುತ್ತಿದ್ದಾರೆ. ದೇಶಕ್ಕಿಂತ ವ್ಯಕ್ತಿಯೇ ಮುಖ್ಯವಾಗಿದ್ದಾರೆ. ವ್ಯಕ್ತಿ ಪೂಜೆ ಬಿಟ್ಟು, ದೇಶದ ಕಡೆಗೆ ಗಮನ ಕೊಡಿ, ಯುದ್ಧದಲ್ಲಿ ಹೋರಾಡಿದ ಸೈನಿಕರ ತ್ಯಾಗ, ಬಲಿದಾನಕ್ಕೆ ಗೌರವ ಕೊಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.