ಇನ್ಮುಂದೆ ‘ನಂದಿನಿ’ ಇಡ್ಲಿ ಮತ್ತು ದೋಸೆ ಹಿಟ್ಟು ಮನೆಬಾಗಿಲಿಗೆ

Views: 102
ಕನ್ನಡ ಕರಾವಳಿ ಸುದ್ದಿ:’ನಂದಿನಿ ವೇ’ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆಮಾಡಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಮಾತ್ರ ಇದು ಲಭ್ಯವಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಜನರ ಬೇಡಿಕೆಯಂತೆ ಇತರ ಜಿಲ್ಲೆಗಳಲ್ಲಿಯೂ ಈ ಉತ್ಪನ್ನ ಮಾರಾಟ ಮಾಡಲು ಕೆಎಂಎಫ್ ನಿರ್ಧರಿಸಿದೆ.
ಬೆಂಗಳೂರು ಸೇರಿದಂತೆ ವಿವಿಧ ನಗರದಲ್ಲಿ ಇ-ಕಾಮರ್ಸ್ ಮೂಲಕ ವಹಿವಾಟು ಹೆಚ್ಚಾಗುತ್ತಿದೆ. ಆದರೆ ಈಗ ‘ನಂದಿನಿ’ ಇಡ್ಲಿ ಮತ್ತು ದೋಸೆ ಹಿಟ್ಟು ಆನ್‌ಲೈನ್‌ನಲ್ಲಿ ಲಭ್ಯವಿಲ್ಲ. ಕೇವಲ ಬೂತ್‌ಗಳಲ್ಲಿ ಖರೀದಿ ಮಾಡಬೇಕಿದೆ. ಆದ್ದರಿಂದ ಏಪ್ರಿಲ್‌ನಿಂದ ಪ್ರಮುಖ ಇ-ಕಾಮರ್ಸ್ ಕಂಪನಿಗಳಿಗೆ ಇದನ್ನು ಮಾರಾಟ ಮಾಡಲು ಅನುಕೂಲ ಮಾಡಿಕೊಡಲಾಗುತ್ತದೆ. ಆಗ ಗ್ರಾಹಕರ ಮನೆ ಬಾಗಿಲಿಗೆ ದೋಸೆ, ಇಡ್ಲಿ ಹಿಟ್ಟು ಬರಲಿದೆ.
ಪ್ರಸ್ತುತ ಸುಮಾರು 4,600 ಕೆಜಿ ‘ನಂದಿನಿ’ ಇಡ್ಲಿ ಮತ್ತು ದೋಸೆ ಹಿಟ್ಟು ಮಾರಾಟವಾಗುತ್ತಿದೆ. ಈ ಉತ್ಪನ್ನಕ್ಕೆ ಬೇಡಿಕೆ ಸಹ ಹೆಚ್ಚುತ್ತಿದ್ದು, ಕೆಎಂಎಫ್ ಮುಂದಿನ ಮೂರು ತಿಂಗಳಿನಲ್ಲಿ ಮಾರಾಟವನ್ನು 15,000 ಕೆಜಿಗೆ ಹೆಚ್ಚಿಸಲು ತಯಾರಿ ನಡೆಸಿದೆ. ಈ ಉತ್ಪನ್ನದ 450 ಗ್ರಾಂ ಪ್ಯಾಕೇಟ್ 40 ಮತ್ತು 900 ಗ್ರಾಂ ಪ್ಯಾಕೆಟ್‌ಗೆ 80 ರೂ. ದರವಿದೆ.
ಕೆಎಂಎಫ್ ಅಧಿಕಾರಿಗಳು ಮಾತನಾಡಿ, ಪ್ರಸ್ತುತ ‘ನಂದಿನಿ’ ಇಡ್ಲಿ ಮತ್ತು ದೋಸೆ ಹಿಟ್ಟು ಬೆಂಗಳೂರು ನಗರದ 750 ನಂದಿನಿ ಬೂತ್‌ಗಳಲ್ಲಿ ಲಭ್ಯವಿದೆ. ಏಪ್ರಿಲ್ ತಿಂಗಳಿನಿಂದ ಇ-ಕಾಮರ್ಸ್ ಮೂಲಕ ಮತ್ತು ನಗರದ ಪ್ರಮುಖ ರಿಟೇಲ್ ಶಾಪ್‌ಗಳಲ್ಲಿ ಇದನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
ನಗರ ಪ್ರದೇಶದಲ್ಲಿ ಕೆಲಸಕ್ಕೆ ಹೋಗುವ ಬ್ಯುಸಿಯಲ್ಲಿರುವ ಜನರು ರೆಡಿ ಟು ಈಟ್ ಮಾದರಿ ಆಹಾರಗಳನ್ನು ಇಷ್ಟಪಡುತ್ತಾರೆ. ಅವರನ್ನು ಗುರಿಯಾಗಿಸಿಕೊಂಡು ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡಲು ‘ನಂದಿನಿ’ ಇಡ್ಲಿ ಮತ್ತು ದೋಸೆ ಹಿಟ್ಟು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಹ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.