ಆಟವಾಡಲು ಕೊಟ್ಟಿದ್ದ ಮೀನನ್ನು ನುಂಗಿದ ಮಗು ಪ್ರಾಣಾಪಾಯದಿಂದ ಪಾರು

Views: 87
ಪೋಷಕರು ತಮ್ಮ ಮಗುವಿಗೆ ಆಟವಾಡಲು ಮೀನು ಕೊಟ್ಟಿದ್ದಾರೆ. ಈ ವೇಳೆ ಕ್ಷಣಾರ್ಧದಲ್ಲೇ ಮಗುವು ಮೀನು ನುಂಗಿ ಬಿಟ್ಟಿದೆ. ಇದರಿಂದಾಗಿ ಉಸಿರುಗಟ್ಟುವ ಸ್ಥಿತಿಗೆ ತಲುಪಿದ್ದ ಒಂದು ವರ್ಷದ ಮಗುವನ್ನು ವೈದ್ಯರು ಸಕಾಲದಲ್ಲಿ ಚಿಕಿತ್ಸೆ ನೀಡಿ ರಕ್ಷಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಗಂಜಿನಹಳ್ಳಿ ಯೋಗೇಶ್, ರೋಜಾ ದಂಪತಿ ತಮ್ಮ ಒಂದು ವರ್ಷದ ಮಗು ಕೈಗೆ ಆಟ ಆಡಲು ಮೀನು ನೀಡಿದ್ದರು. ಆಟವಾಡುತ್ತಾ ಏಕಾಏಕಿ ಮಗು ಮೀನು ನುಂಗಿದೆ. ಕೂಡಲೇ ಮಗುವನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಮಗುವನ್ನು ಕರೆದುಕೊಂಡು ಬಂದಾಗ ತ್ವರಿತವಾಗಿ ಸ್ಪಂದಿಸಿದ ವೈದ್ಯರು ಮಗುವಿನ ಜೀವ ಉಳಿಸಲು ಎಲ್ಲ ರೀತಿಯಲ್ಲೂ ಸಹಕರಿಸಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿ ಮೀನನ್ನು ಹೊರ ತೆಗೆದಿದ್ದಾರೆ. ಒಂದು ವರ್ಷದ ಪ್ರತೀಕ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನೂ ಇದೇ ವೇಳೆ ಪೋಷಕರಿಗೆ ವೈದ್ಯರು ಸಲಹೆಯನ್ನೂ ನೀಡಿದ್ದಾರೆ. ಯಾವ ಕಾರಣಕ್ಕೂ ಎಳೆ ಹಸುಳೆಗಳ ಪಕ್ಕದಲ್ಲಿ ಬಾಯಿಗೆ ಹಾಕಿಕೊಳ್ಳಬಹುದಾದಷ್ಟು ಸಣ್ಣದಾದ ಯಾವುದೇ ಸೂಜಿ, ಪಿನ್, ಬಟನ್, ವಯರ್‌ಗಳನ್ನು ಇಡಬೇಡಿ. ಸಣ್ಣ ಪುಟಾಣಿಗಳಿಗೆ ಸಿಕ್ಕಿದ್ದನ್ನು ಬಾಯಿಗೆ ಹಾಕಿಕೊಳ್ಳುವ ಅಭ್ಯಾಸವಿರುತ್ತದೆ. ಇದು ಕೆಲವೊಮ್ಮೆ ಅಪಾಯಕ್ಕೂ ಕಾರಣವಾಗುತ್ತದೆ ಎಂದಿದ್ದಾರೆ.