ಭಾವಿ ಸಮೀರ ಶ್ರೀವಾದಿರಾಜರು ನಡೆದಾಡಿದ ಪುಣ್ಯ ಭೂಮಿ ಹೂವಿನಕೆರೆ
Views: 46
ಕುಂದಾಪುರ: ಕನ್ನಡ ಹರಿದಾಸ ಕ್ಷೇತ್ರದ ದೀಮಂತ ಶ್ರೇಷ್ಠರಾದ ಪುರಂದರದಾಸರು ಕನಕದಾಸರ ಸಮಕಾಲೀನರಾಗಿದ್ದ ದಾರ್ಮಿಕ ಜಾಗೃತಿಯ ನವಚೇತನವನ್ನು ಮೂಡಿಸಿದಾರ್ಶನಿಕ ಪುಣ್ಯ ಪವಾಡ ಪುರುಷರು ಅಷ್ಟಮಠಗಳಲ್ಲಿ ಒಂದಾಗಿರುವ ವಾದಿರಾಜರ ಜನ್ಮಮಹೋತ್ಸವವು ಫೆ ೧೩ ರಂದು ಅಸೋಡು ಗ್ರಾಮದ ಹೂವಿನಕೆರೆಯಲ್ಲಿ ವಾದಿರಾಜರು ನಡೆದಾಡಿದ ಪುಣ್ಯಭೂಮಿಯಲ್ಲಿ ಸಂಭ್ರಮದ ವಾತಾವರಣ. ಆನೆಗುಡ್ಡೆ ದೇವಸ್ಥಾನದ ಹಿಂಬಾಗದಿಂದ ವಕ್ವಾಡಿ ಮಾರ್ಗವಾಗ4 ಕಿ.ಮೀ ದೂರದ ಹೂವಿನಕೆರೆ ಎಂಬ ಹಳ್ಳಿಯಲ್ಲಿ ಶಾರ್ವರಿ ಸಂವತ್ಸರದ ಮಾಘ ಮಾಸ ಶುದ್ದ ದ್ವಾದಶಿಯಂದು ಬೆಳಗಿನ ಜಾವ ಕ್ರಿ.ಶ. 1481 ರಲ್ಲಿ ವಾದಿರಾಜರು ಜನಿಸಿದ್ದಾರೆ. ತಂದೆ ಶ್ರೀ ರಾಮಾಚಾರ್ಯ, ತಾಯಿ ಗೌರಿ ದೇವಿ
ವಾದಿರಾಜರು ಜನಿಸಿದ `ಗೌರಿ ಗದ್ದೆ’
ಅಸೋಡು ಬೆಂಕಿಕಾನ್ ನಂದಿಕೇಶ್ವರ ದೇವಸ್ಥಾನದ ದಕ್ಷಿಣ ಭಾಗದಲ್ಲಿ ಕಂಗೊಳಿಸುತ್ತಿರುವ ಹಸಿರು ಸಂಮೃದ್ಧ ಬೆಳೆಯ ಪರಿಸರದ ತಪ್ಪಲಲ್ಲಿ ಪುಣ್ಯ ಭೂಮಿ ಹೂವಿನಕೆರೆಯ ಗೌರಿ ಗದ್ದೆ ಇಂದಿಗೂ ಪ್ರಸಿದ್ಧಿ. ಹಲವಾರು ವರ್ಷಗಳಿಂದ ಪುತ್ರ ಸಂತಾನವಿಲ್ಲದ ರಾಮಾಚಾರ್ಯ ದಂಪತಿಗಳು ಅಂದಿನ ಅಷ್ಟ ಮಠದ ಮಹಾಜ್ಞಾನಿಗಳು ಪವಾಡ ಪುರುಷರೆಂದೇ ಖ್ಯಾತರಾಗಿರುವ ವಾಗೀಶ ತೀರ್ಥರಲ್ಲಿ ಪುತ್ರ ಸಂತಾನಕ್ಕಾಗಿ ಬಯಕೆ ಮಂದಿಟ್ಟು ಯತಿಗಳ ಸಂಸ್ಥಾನದ ಆರಾದ್ಯಮೂರ್ತಿ ಶ್ರೀ ಭೂವರಹ ಸ್ವಾಮಿಯ ಫಲ ಮಂತ್ರಾಕ್ಷತೆ ನೀಡಿ. `ನಿಮಗೆ ಹುಟ್ಟುವ ಮಗನು ನಮ್ಮ ಪೀಠದ ಸಂನ್ಯಾಸಿಯೇ ಆಗುವನು ಆದರೆ, ಮನೆಯೊಳಗೆ ಮಗು ಹುಟ್ಟದರೆ ನಿಮಗಿರಲಿ ಹೊರಗೆ ಜನಿಸಿದರೆ ನಮ್ಮ ದೇವರಿಗಿರಲಿ’ ಎಂದು ವಾಗ್ದಾನ ನೀಡಿದರು.
ಗುರುವಿನ ಅನುಗ್ರಹದಂತೆ ಗೌರಿ ಗರ್ಬಿಣಿಯಾದಳು ಪ್ರಸವಕ್ಕೆ ಹತ್ತಿರವಾಗುತ್ತಿದ್ದಂತೆ ಮನೆಯಿಂದ ಹೊರಗೆ ಹೋಗದೆ ಒಳಗೆ ಇರಲು ಪ್ರಯತ್ನಿಸಿದರು. ಅಂದು ಏಕಾದಶಿ ದಿನ ರಾತ್ರಿಯಿಂದಲೇ ರಾಮಾಚಾರ್ಯರು ವೃತದಲ್ಲಿದ್ದರು. ಬೆಳಗಿನ ಜಾವ ಹೊಲದಲ್ಲಿ ದನ ಪೈರು ಮೆಯುತ್ತಿರುದನ್ನು ಕಂಡು ಓಡಿಸಲು ಯಾರು ಇಲ್ಲದೆ ಇದ್ದಾಗ ಗೌರಿ ದೇವಿಯೇ ಅಲ್ಲಿಗೆ ಹೋಗಲೆ ಬೆಕಾಯಿತು. ಇದ್ದಕ್ಕಿದ್ದಂತೆ ಹೊಲದಲ್ಲಿಯೇ ಪ್ರಸವ ವೇದನೆ ಪ್ರಾರಂಭವಾಗಿ ಗೌರಿ ಅಲ್ಲಿಯೇ ಕುಸಿದಳು. ಮೊದಲೇ ತಿಳಿದಿದ್ದ ವಾಗೀಶ ತೀರ್ಥರು ಪ್ರಸವಕ್ಕೆ ಸೂಲಗಿತ್ತಿಯರನ್ನು ಅಲ್ಲಿಗೆ ಕಳುಹಿಸಿ ಸುಖಪ್ರಸವ ಮಾಡಿಸಿದರು. ಭೂವರಹನ ಅನುಗ್ರಹದಿಂದ ಹುಟ್ಟಿದ ಮಗುವಿಗೆ `ಭೂವರಹ’ ಎಂದು ನಾಮಕರಣ ಮಾಡಿ ಮಗುವನ್ನು ಕರೆದೊಯ್ಯಲು ವಾಗೀಶ ತೀರ್ಥರು ಅಲ್ಲಿಗೆ ಬಂದರು. 1488 ರಲ್ಲಿ ವಾಗೀಶ ತೀರ್ಥರಿಂದ ಸಂನ್ಯಾಸ ದೀಕ್ಷೆ ನೀಡಿ ವಾದಿರಾಜ ತೀರ್ಥ ಎಂಬ ಹೆಸರು ನೀಡಿದರು. ಹೀಗೆ ವಾದಿರಾಜರು ಜನ್ಮತಾಳಿದ ಸ್ಥಳಕ್ಕೆ `ಗೌರಿ ಗದ್ದೆ’ ಎಂದಾಯಿತು ಇದೇ ಸ್ಥಳದಲ್ಲಿ ಈಗ ವಾದಿರಾಜರ ಗುಡಿ ನಿರ್ಮಾಣಗೊಂಡಿದೆ. ಸೊದೆ ಮಠಕ್ಕೆ ಈಗಲೂ ಗೌರಿಗದ್ದೆಯಲ್ಲಿ ಬೆಳೆದ ಭತ್ತವನ್ನು ಅಕ್ಕಿ ಮಾಡಿ ವಾದಿರಾಜರ ಆರಾಧನೆಗೆ ತಂದು ನೈವೆದ್ಯ ಮಾಡುತ್ತಾರೆ. ( ಸುಮಾರು 120 ವರ್ಷಗಳ ಕಾಲ ಬದುಕಿದ್ದ ವಾದಿರಾಜರು ಕೊನೆಯಲ್ಲಿ ಶಿರಸಿಯಿಂದ 20ಕಿ.ಮೀಟರ್ ದೂರದಲ್ಲಿರುವ ಸೋಂದ ಎಂಬಲ್ಲಿ ಸಶರೀರ ವೃಂದಾವನಸ್ಥರಾದರು.)
ಹೂವಿನಕೆರೆಯಲ್ಲಿ ತಾಯಿಯ ಅನುಗ್ರಹ ಪಡೆದು ವಾದಿರಾಜರ ವಿಶ್ವಪರಿಯಟನೆ:
ಗುರುಗಳಿಂದ ದೀಕ್ಷೆ ಪಡೆದ ವಾದಿರಾಜರು ವೈಷ್ಣವ ತೀರ್ಥ ಕ್ಷೇತ್ರಗಳಿಗೆ ಪಾದಯಾತ್ರೆಯ ಮುಖಾಂತರ ವಿಶ್ವಪರಿಯಟನೆಗೆ ತಾಯಿಯ ಅನುಗ್ರಹ ಪಡೆಯಲು ಹುಟ್ಟೂರಾದ ಹೂವಿನಕೆರೆಗೆ ಬರುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಕಾಲ್ನನಡಿಗೆಯಲ್ಲಿ ಕ್ರಮಿಸುವ ವಿಷಯ ಕೇಳಿ ತಾಯಿ ಒಪ್ಪಿಗೆ ನೀಡಲಿಲ್ಲ ಆದರೆ ತಾಯಿಯನ್ನು ಸಂತೈಸುತ್ತಾ ಗುರು ಆಜ್ಞೆಯನ್ನು ಪಡೆದ ನಂತರ ನನ್ನ ನಿರ್ಧಾರ ಬದಲಿಸುವಂತಿಲ್ಲ ನೀನು ದುಖಿಸಬಾರದು ನನ್ನ ಬದಲಿಗೆ ನನ್ನದೆ ಪಡಿಯಚ್ಚಿನಂಥ ಮೂರ್ತಿಯನ್ನು ನಿನಗೆ ಮಾಡಿ ಕೊಡುತ್ತೇನೆ. ನನ್ನ ನೆನಪಾದಗಲೆಲ್ಲ ಅದನ್ನು ನೋಡುತ್ತಾ ನನ್ನ ಸಾಮೀಪ್ಯ ನೆನಸಿಕೊ ಎಂದು ಕಂಚಿನ ಮೂರ್ತಿಯನ್ನು ರಚಿಸಿ ತಾಯಿಗೆ ಸಮರ್ಪಿಸುತ್ತಾರೆ ಆ ವಿಗ್ರಹ ಇಂದಿಗೂ ಸೊದೆ ಶ್ರೀಗಳ ಆಶ್ರಯದಲ್ಲಿದ್ದು ಪರಂಪರೆಯಿAದ ಪೂಜೆಗೊಳ್ಳುತ್ತಾ ಬಂದಿದೆ.
ವಾದಿರಾಜರ ಸಾಧನೆ: ಶ್ರೀ ವಾದಿರಾಜರು ನಿತ್ಯ ನೈವೇದ್ಯವನ್ನು ಚಿನ್ನದ ಹರಿವಾಣದಲ್ಲಿಟ್ಟು ತನ್ನ ತಲೆಯ ಮೇಲೆ ಎತ್ತಿ ಹಿಡಿದ ಕೂಡಲೇ ಶ್ರೀ ಹಯಗ್ರೀವ ದೇವರು ಕುದುರೆ ರೂಪದಲ್ಲಿ ಬಂದು ಎರಡೂ ಕಾಲುಗಳನ್ನು ಶ್ರೀ ವಾದಿರಾಜರ ಭುಜದ ಮೇಲಿಟ್ಟು ನೈವೇದ್ಯ ಸ್ವೀಕರಿಸಿ ವಾದಿರಾಜರಿಗೆ ವಿಶೇಷ ಅನುಗೃಹ ವಾಗುತ್ತಿತ್ತಂತೆ. ಶ್ರೀ ವಾದಿರಾಜರು ಶ್ರೀ ಕೃಷ್ಣ ಮಠಕ್ಕೆ ವಿಶೇಷ ಕೊಡುಗೆಯಾಗಿ ಕೃಷ್ಣನ ಸನ್ನಿಧಿಯಲ್ಲಿ ಮುಖ್ಯ ಪ್ರಾಣ ಮತ್ತು ಗರುಡ ದೇವರನ್ನು ಎಡ-ಬಲ ದಲ್ಲಿ ಸ್ಥಾಪಿಸಿ ನಿತ್ಯ ಪೂಜಿಸಿ,ತಮ್ಮ ಗುರುಗಳಾದ ಮದ್ವಾಚಾರ್ಯರ ವಿಶಿಷ್ಟ ಶೈಲಿಯ ವಿಗ್ರಹ ಸ್ಥಾಪಿಸಿ ಅಷ್ಟ ಮಠದ ಯತಿಗಳಿಗೆ ಗುರು ಪೂಜೆಯಲ್ಲಿ ವ್ಯವಸ್ಥೆ ಮಾಡಿದರು. ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ಪ್ರತಿಷ್ಠೆ ಮಾಡಿದ್ದಾರೆ. ವಾದಿರಾಜರ ಸೇವಕರಾಗಿ ಸೊದೆಯಲ್ಲಿ ಶ್ರೀ ಭೂತರಾಜರು ನೆಲೆಸುವಂತಾಯಿತು. ತಿರುಪತಿ ಬೆಟ್ಟವನ್ನೇರಿ ಮೊಣಕಾಲನ್ನೂರಿಕೊಂಡೇ ಶ್ರೀನಿವಾಸ ದೇವರನ್ನು ಸಂದರ್ಶಸಿಸಿ ಆತನಿಗೆ `ಸಾಲಿಗ್ರಾಮ ಮಾಲಿಕೆ’ ಅರ್ಪಿಸಿದರು.
ವಾದಿರಾಜರ ಸರ್ವಶ್ರೇಷ್ಠ ಗ್ರಂಥ `ಶ್ರೀ ರುಕ್ಮೀಣೇಶ ವಿಜಯ’ ಕೇವಲ 19 ದಿನಗಳಲ್ಲಿ ರಚಿಸಿ 19 ಅದ್ಯಯನದ 1238 ಶ್ಲೋಕಗಳನ್ನೊಳಗೊಂಡಿದೆ.
ವಾದಿರಾಜರು ನಡೆದಾಡಿದ ಸ್ಥಳದಲ್ಲಿ ಹೆಜ್ಜೆಯ ಗುರುತು : ಇಲ್ಲಿಯೇ ಹೂವಿನಕೆರೆಯಿಂದ ಹರಿದುಹೋಗುವ ನದಿಯ ಪಕ್ಕದಲ್ಲಿ ಬಂಡೆಯ ಮೇಲೆ ವಾದಿರಾಜರು ಬಾಲ್ಯದಲ್ಲಿ ನಡೆದಾಡಿದ ಸ್ಥಳದಲ್ಲಿ ಮರ‍್ನಾಲ್ಕು ಹೆಜ್ಜೆಯ ಗುರುತು ಕಾಣಿಸಿಕೊಂಡಿದೆ. ಹಿಂದೆ ಬೀಮನ ಹೆಜ್ಜೆಯ ಗುರುತು ಎಂದು ಹೇಳಲಾಗಿತ್ತು. ಕ್ರಮೇಣ ಪಾಜಕ ಕ್ಷೇತ್ರದಲ್ಲಿ ಮದ್ವಾಚಾರ್ಯರ ಪಾದಕ್ಕೆ ಈ ಹೆಜ್ಜೆಗಳು ಹೋಲಿಕೆಯಾಗಿದ್ದರಿಂದ ವಾದಿರಾಜರ ಹೆಜ್ಜೆ ಎಂದು ಭಕ್ತರು ನಂಬಿದ್ದರು. ಈ ಹೆಜ್ಜೆಯ ಗುರುತುಗಳನ್ನು ರಕ್ಷಣೆಗಾಗಿ 1980 ರಲ್ಲಿ ಮಂಟಪ ಕಟ್ಟಲಾಗಿದೆ. ವಾದಿರಾಜರು ಭಾವಿ ಸಮೀರರಾದ ಕಾರಣ ವಾಯು ಶಕ್ತಿಯಿಂದ ಕ್ಷಣಮಾತ್ರದಲ್ಲಿ ಹೆಜ್ಜೆಯ ಗುರುತು ಕಾಣಿಸಿಕೊಂಡಿದೆ ಎಂಬುವುದು ಭಕ್ತರ ನಂಬಿಕೆಗೆ ಅರ್ಹವಾಗಿದೆ.
ವಾದಿರಾಜರ ಕುಟುಂಬಿಕರ ಆರಾದ್ಯ ದೇವರಾದ ಚೆನ್ನಕೇಶವ ದೇವಾಲಯ ಅವರ ಪರಮ ಶಿಷ್ಯ ಭೂತದೇವರ ಮೂರ್ತಿ ಇಲ್ಲಿದ್ದು ನಿತ್ಯವು ಪೂಜೆ ನಡೆಯುತ್ತಿದೆ. ದೇವಸ್ಥಾನದ ಎದುರುಗಡೆ ವಿಶಾಲವಾದ ಕೆರೆ, ಗೌರಿ ಗದ್ದೆಯಲ್ಲಿ ವಾದಿರಾಜರ ಸಾಲಿಗ್ರಾಮ ಮೂರ್ತಿ ಭಕ್ತಾಭಿಮಾನಿಗಳನ್ನು ಆಕರ್ಷಿಸಿದೆ.
ಮಠದಲ್ಲಿ ಪೂಜಾ ಕೈಂಕರ್ಯ: ಹೂವಿನಕೆರೆ ಮತ್ತು ಸುತ್ತ ಮುತ್ತ ಗ್ರಾಮಗಳು ವಾದಿರಾಜ ಮಹಾ ಸಂಸ್ಥಾನಕ್ಕೆ ಸೇರಿದ್ದು ಕಳೆದ ಮೂರು ತಲೆಮಾರುಗಳಿಂದ ವೇದ ಮೂರ್ತಿ ಗುಂಡಾ ಭಟ್ಟರು ಚೆನ್ನಕೇಶವ ದೇವರ ಪೂಜಾ ಕಾರ್ಯಗಳನ್ನು ನೆರವೇರಿಸಿಕೊಂಡು ಬಂದಿದ್ದು, ನಂತರ ಅವರ ಮಗ ವಿದ್ವಾನ್ ವಾದಿರಾಜ ಭಟ್ಟ್ ಪ್ರಸ್ತುತ ವಾಗೀಶ ಭಟ್ಟರು ನಿತ್ಯ ಪೂಜೆ ಪುನಸ್ಕಾರಗಳನ್ನು ನಡೆಸಿಕೊಂಡು ಬಂದಿದ್ದಾರೆ. ಇಲ್ಲಿಯೇ ಪಕ್ಕದಲ್ಲಿರುವ ಭೂತರಾಜರ ಪೂಜೆಯನ್ನು ಇತ್ತೀಚೆಗೆ ಮಂಜುನಾಥ ಉಡುಪ ಮತ್ತು ಮಕ್ಕಳಿಂದ ನಡೆಯುತ್ತಿದೆ. ಸೋದೆ ಮಠದ ಶ್ರೀಗಳಾದ ವಿಶ್ವ ವಲ್ಲಭ ತೀರ್ಥರು ಪರ್ಯಾಯ ಪೀಠವನ್ನು ಏರುವ ಸಂದರ್ಭದಲ್ಲಿ ಹೂವಿನಕೆರೆ ವಾದಿರಾಜರ ಜನ್ಮ ಕ್ಷೇತ್ರವು ವಿಶೇಷ ಆಕರ್ಷಣೀಯ ಸ್ಥಳವಾಗಿ ರಾಜ್ಯಾದ್ಯಾಂತ ಭಕ್ತಾಭಿಮಾನಿಗಳು ಇಂದಿಗೂ ಇಲ್ಲಿಗೆ ಆಗಮಿಸುತ್ತಿದ್ದಾರೆ.
ವಾದಿರಾಜ ಜಯಂತಿಯಂದು ಪ್ರತಿವರ್ಷವು ಸೊದೆ ಮಠದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ವಾದಿರಾಜ ಸಂಸ್ಥಾನದ ಶಿಷ್ಯರಿಂದ ಪೂಜೆ, ಆರಾದನಾ ಕಾರ್ಯಕ್ರಮಗಳು ನಡೆಯುತ್ತದೆ. ದೈವಜ್ಞ ಬ್ರಾಹ್ಮಣರು, ರಾಯ್ಕರ್, ವರ್ಣಿಕರ್, ಕುಟುಂಬಸ್ಥರು ಹೆಚ್ಚಾಗಿ ಈ ಮಠದ ಶಿಷ್ಯರು ಮತ್ತು ಆರಾದಕರಾಗಿದ್ದಾರೆ,
ವಾದಿರಾಜ ಜಯಂತಿಯ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು: ಫೆ13 ರಂದು ಅಹೋರಾತ್ರಿ ಜಾಗರಣೆ, ಹರಿನಾಮ ಸ್ಮರಣೆ, ವಾದಿರಾಜ ಭಜನಾ ಮಂಡಳಿಯವರಿಂದ ಭಜನೆ ಫೆ.13 ರಂದು ಬೆಳಿಗ್ಗೆ 5ರಿಂದ ಸೋದೆ ಮಠಾದೀಶೆರಿಂದ ಮಹಾಪೂಜೆ ನಡೆಯಲಿದೆ,.
ಪ್ರವಾಸಿ ತಾಣವಾಗಿ ವಾದಿರಾಜರ ಜನ್ಮಕ್ಷೇತ್ರ:
ವಾದಿರಾಜರ ಜನ್ಮ ಕ್ಷೇತ್ರ ವೀಕ್ಷಣೆಗೆ ದೇಶ-ವಿದೇಶಗಳಿಂದ ಭಕ್ತಾಭಿಮಾನಿಗಳು ಇಲ್ಲಿಗೆ ಆಗಮಿಸುತ್ತಾರೆ. ಚೆನ್ನಕೇಶವ, ಭೂತರಾಜರ ದೇವಾಲಯ, ವಾದಿರಾಜರ ಗರ್ಭಗುಡಿ ಹಂತ ಹಂತವಾಗಿ ಜೀರ್ಣೋದ್ಧಾರ ಆಗಬೇಕಿದೆ.ಇಲ್ಲಿಯೇ ಹತ್ತಿರ ಬಂಡೆಯ ಮೇಲೆ ವಾದಿರಾಜರು ನಡೆದಾಡಿದ `ಬೀಮನ ಹೆಜ್ಜೆ’ ಎಂದು ಗುರುತಿಸಿಕೊಂಡಿರುವ ಈ ಸ್ಥಳವನ್ನು ಪ್ರವಾಸಿ ಸ್ಥಳವನ್ನಾಗಿ ನಿರ್ಮಿಸಲು ಭಕ್ತರು ಹಾಗೂ ದಾನಿಗಳ ಸಹಾಯದ ನಿರೀಕ್ಷೆಯಲ್ಲಿದ್ದೇವೆ. ಎಂದು ಆಡಳಿತ ಮಂಡಳಿಯವರು ತಿಳಸಿರುತ್ತಾರೆ
– ಚಿತ್ರ-ಲೇಖನ: ಸುಧಾಕರ ವಕ್ವಾಡಿ