ಕರ್ನಾಟಕದ ಅತಿ ಉದ್ದದ 2.25 ಕಿಮೀ ಕೇಬಲ್ ಸಿಗಂದೂರು ಸಂಪರ್ಕ ಸೇತುವೆ ಶೀಘ್ರದಲ್ಲೇ ಲೋಕಾರ್ಪಣೆಗೆ ಸಿದ್ಧತೆ

Views: 6
ಶಿವಮೊಗ್ಗ ಜಿಲ್ಲೆಯ ಜನರ ಬಹು – ದಿನಗಳ ಕನಸು ಶೀಘ್ರದಲ್ಲೇ ನನಸಾಗಲಿದೆ. ಸಾಗರ ತಾಲ್ಲೂಕಿನಲ್ಲಿ ಕರ್ನಾಟಕದ ಅತಿ ಉದ್ದದ ಕೇಬಲ್ ಸೇತುವೆ ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ. ಇದು 2.25 ಕಿಮೀ ಉದ್ದವಿದ್ದು, ಪ್ರಯಾಣಿಕರಿಗೆ ಸಾಕಷ್ಟು ಸಮಯಾವಕಾಶ ಉಳಿತಾಯವಾಗುತ್ತದೆ.
ಈ ಬಗ್ಗೆ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿರುವ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು, ‘ಕೇಂದ್ರ ಸರ್ಕಾರದ 600 ಕೋಟಿ ರೂಪಾಯಿ ಅನುದಾನದೊಂದಿಗೆ ನಡೆಯುತ್ತಿರುವ ಹೊಳೆಬಾಗಿಲು – ಸಿಗಂದೂರು ಸಂಪರ್ಕ ಸೇತುವೆ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದ್ದು, 2024 ರ ಫೆಬ್ರವರಿ ವೇಳೆಗೆ ಪೂರ್ಣಗೊಳಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ.
‘ಈ ಸೇತುವೆಯ ಉದ್ಘಾಟನಾ ಸಮಾರಂಭಕ್ಕೆ ಕೇಂದ್ರದ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಆಹ್ವಾನಿಸಲು ಚಿಂತನೆ ನಡೆಸಲಾಗಿದ್ದು, ಇದರ ಲೋಕಾರ್ಪಣೆಯೊಂದಿಗೆ ಈ ಭಾಗದ ಜನರ ಬಹು ವರ್ಷಗಳ ಬೇಡಿಕೆ ಈಡೇರಿದಂತಾಗುತ್ತದೆ’ ಎಂದು ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, 19 ಫೆಬ್ರವರಿ 2018ರಂದು ಈ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು.
ಶರಾವತಿ ಹಿನ್ನೀರಿನಲ್ಲಿ ಸೇತುವೆ ನಿರ್ಮಾಣದಿಂದ ಈ ಭಾಗದ ಪ್ರಯಾಣಿಕರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ. ಸಾಗರದಿಂದ ಸಿಗಂದೂರು ಅಥವಾ ತುಮರಿಗೆ ತೆರಳಲು ಸ್ಥಳೀಯರು ಹಾಗೂ ಪ್ರವಾಸಿಗರು ರಸ್ತೆ ಮಾರ್ಗವಾಗಿ ಸುಮಾರು 80 ಕಿಮೀ ಕ್ರಮಿಸಬೇಕಿದೆ. ಸೇತುವೆ ನಿರ್ಮಾಣದಿಂದ ಆ ದೂರ ಅರ್ಧದಷ್ಟು ಕಡಿಮೆಯಾಗಲಿದೆ. ಪ್ರಸ್ತುತ ಸೇತುವೆ ಇಲ್ಲದಿರುವುದರಿಂದ ಲಾಂಚ್ ಮೂಲಕವೇ ಪ್ರಯಾಣಿಸಬೇಕಾಗಿದೆ.
ಪ್ರತಿದಿನ ಸುಮಾರು 5,000 ಭಕ್ತರು ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ಭೇಟಿ ನೀಡುತ್ತಾರೆ. ಹಬ್ಬಗಳ ಸಂದರ್ಭದಲ್ಲಿ 10,000ಕ್ಕೂ ಹೆಚ್ಚಿನ ಜನರು ಬರುತ್ತಾರೆ. ಜೊತೆಗೆ ಇಲ್ಲಿನ 5,000ಕ್ಕೂ ಹೆಚ್ಚು ಕುಟುಂಬಗಳು ದಶಕಗಳಿಂದ ಲಾಂಚ್‌ನ್ನು ಅವಲಂಬಿಸಿವೆ. ಆದರೆ, ಈ ಸೇವೆ ಸಂಜೆ 6:30ಕ್ಕೆ ನಿಲ್ಲುತ್ತದೆ. ಈ ಸೇತುವೆಯಿಂದ ಶರಾವತಿ ಹಿನ್ನೀರು ಪ್ರದೇಶದ ಹಲವು ಹಳ್ಳಿಗಳಲ್ಲಿ ಶಿಕ್ಷಣ, ಆರೋಗ್ಯ ಹಾಗೂ ವ್ಯಾಪಾರದಲ್ಲಿ ಸಾಕಷ್ಟು ಸುಧಾರಣೆಯಾಗಲಿದೆ.
ಸಿಗಂದೂರು ಪ್ರಸಿದ್ಧ ಪುಣ್ಯಕ್ಷೇತ್ರವಾಗಿದೆ. ಚೌಡೇಶ್ವರಿ ಅಮ್ಮನ ದೇವಾಲಯವಿದ್ದು, ಈ ತಾಯಿಯನ್ನು ಸಿಗಂದೂರೇಶ್ವರಿ ಎಂದು ಕರೆಯುತ್ತಾರೆ. ಸಿಗಂದೂರು ಸಾಗರದಿಂದ ಸುಮಾರು 32 ಕಿಮೀ ದೂರದಲ್ಲಿದ್ದು, ಸಾಗರದಿಂದ ಹೊಳೆಬಾಗಿಲುವರೆಗೆ ರಸ್ತೆಯಿದೆ. ಹೊಳೆಬಾಗಿಲಿನಲ್ಲಿ ಲಿಂಗನಮಕ್ಕಿ ಅಣೆಕಟ್ಟಿನ ಹಿನ್ನೀರು ಎದುರಾಗುತ್ತದೆ. ಅಲ್ಲಿ ಲಾಂಚ್ ಮೂಲಕ ಸಾಗಬೇಕು. ಇಲ್ಲಿಗೆ ಸಾಗರ, ಶಿವಮೊಗ್ಗ ಮತ್ತು ಭಟ್ಕಳದಿಂದ ಬಸ್ ವ್ಯವಸ್ಥೆಯಿದೆ.
ಇನ್ನು, ಹೊಳೆಬಾಗಿಲು – ಸಿಗಂದೂರು ಸಂಪರ್ಕ ಸೇತುವೆ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದ್ದು, 2024 ರ ಫೆಬ್ರವರಿ ವೇಳೆಗೆ ಉದ್ಘಾಟನೆಯಾಗಲಿದೆ. ಈ ಮೂಲಕ ಶಿವಮೊಗ್ಗ ಜನರ ದಶಕಗಳ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ ತೆರಳುವ ಭಕ್ತರು ಕೂಡ ಯಾವುದೇ ರೀತಿಯಲ್ಲಿ ಪ್ರಯಾಸ ಪಡದೆಯೇ ಅಲ್ಲಿಗೆ ತಲುಪಬಹುದು.