ಮಾಹಿತಿ ತಂತ್ರಜ್ಞಾನ
ಮಂಗಳೂರು: ಮನೆಗೆಲಸದ ಜೊತೆಗೆ ಪಾರ್ಟ್ಟೈಮ್ ಜಾಬ್, ಗೂಗಲ್ ರಿವ್ಯೂ ಹೆಸರಿನಲ್ಲಿ ₹1.43 ಲಕ್ಷ ವಂಚನೆ
Views: 0
ಕನ್ನಡ ಕರಾವಳಿ ಸುದ್ದಿ: ನವೆಂಬರ್ 15ರಂದು ಮನೆಯಲ್ಲಿ ಫೇಸ್ಬುಕ್ ವೀಕ್ಷಿಸುತ್ತಿದ್ದ 44 ವರ್ಷದ ಮಹಿಳೆಯೊಬ್ಬರಿಗೆ ಪಾರ್ಟ್ಟೈಮ್ ಉದ್ಯೋಗದ ಜಾಹೀರಾತು ಕಾಣಿಸಿಕೊಂಡಿದೆ. ಅದನ್ನು ಕ್ಲಿಕ್ ಮಾಡಿದಾಗ ಅಪರಿಚಿತ ವಾಟ್ಸಾಪ್ ಸಂಖ್ಯೆ ತೆರೆದುಕೊಂಡಿದ್ದು, ಮನೆಗೆಲಸದ ಜೊತೆಗೇ ಪಾರ್ಟ್ಟೈಮ್ ಕೆಲಸ ಮಾಡಿ ಹಣ ಗಳಿಸುವ ಆಮಿಷವೊಡ್ಡಲಾಗಿತ್ತು.
ಮೊದಲಿಗೆ ಗೂಗಲ್ ರಿವ್ಯೂ ಟಾಸ್ಕ್ ನೀಡಿದ ವಂಚಕರು, ಟೆಲಿಗ್ರಾಂ ಗ್ರೂಪ್ ಒಂದಕ್ಕೆ ಸೇರಿಸಿ ಮಹಿಳೆಯ ಯುಪಿಐ ಐಡಿಗೆ ಆರಂಭದಲ್ಲಿ ₹200 ಮತ್ತು ₹1,040 ಲಾಭಾಂಶದ ರೂಪದಲ್ಲಿ ಜಮೆ ಮಾಡಿ ನಂಬಿಕೆ ಗಿಟ್ಟಿಸಿಕೊಂಡಿದ್ದರು. ಬಳಿಕ ‘ಮಿಸ್ಟರ್ ವಿಕ್ರಮ್’ ಎಂಬ ಹೆಸರಿನ ಟೆಲಿಗ್ರಾಂ ಖಾತೆಯ ಮೂಲಕ ಟ್ರೇಡಿಂಗ್ ಮತ್ತು ಹೆಚ್ಚಿನ ಲಾಭಾಂಶದ ಆಸೆ ತೋರಿಸಲಾಗಿತ್ತು. ಇದನ್ನು ನಂಬಿದ ಮಹಿಳೆ ನವೆಂಬರ್ 17 ಮತ್ತು 18ರಂದು ತಮ್ಮ ಎಸ್ಬಿಐ ಮತ್ತು ಇಂಡಿಯನ್ ಓವರ್ಸೀಸ್ ಬ್ಯಾಂಕ್ ಖಾತೆಗಳಿಂದ ಪೇಟಿಎಂ ಮೂಲಕ ಹಂತ ಹಂತವಾಗಿ ವಂಚಕರು ನೀಡಿದ ವಿವಿಧ ಖಾತೆಗಳಿಗೆ ಒಟ್ಟು ₹1,43,000 ವರ್ಗಾಯಿಸಿ ಮೋಸ ಹೋಗಿದ್ದಾರೆ.






