ಮಂಗಳೂರು: AI ಆನ್‌ಲೈನ್ ತರಗತಿ ನೆಪದಲ್ಲಿ ವಿದ್ಯಾರ್ಥಿಗೆ ವಂಚನೆ
Views: 0
ಕನ್ನಡ ಕರಾವಳಿ ಸುದ್ದಿ: ಕೃತಕ ಬುದ್ಧಿಮತ್ತೆ (AI) ಆಧಾರಿತ ಆನ್‌ಲೈನ್ ಕೋರ್ಸ್‌ಗೆ ದಾಖಲಾತಿ ನೀಡುವುದಾಗಿ ನಂಬಿಸಿ ಮಂಗಳೂರಿನ 57 ವರ್ಷದ ವ್ಯಕ್ತಿಯೊಬ್ಬರಿಂದ ಸೈಬರ್ ವಂಚಕರು ₹1,27,500 ಪಡೆದು ವಂಚಿಸಿರುವ ಘಟನೆ ನಡೆದಿದೆ.
ಈ ಸಂಬಂಧ ಮಂಗಳೂರು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು 6 ತಿಂಗಳ ಹಿಂದೆ ದೂರುದಾರರು ಗೂಗಲ್‌ನಲ್ಲಿ “FOR UPSKILLING IN AI” ಅಡಿಯಲ್ಲಿ “AI-MEDICAL IMAGING” ಕೋರ್ಸ್ ಕುರಿತು ಹುಡುಕಾಟ ನಡೆಸಿದ್ದರು. ಈ ವೇಳೆ ಸೇಲ್ಸ್ ಎಕ್ಸಿಕ್ಯೂಟಿವ್ ‘NEMI ARADHANA’ ಎಂಬ ಹೆಸರಿನೊಂದಿಗೆ ಮೊಬೈಲ್ ಸಂಖ್ಯೆ ಕಾಣಿಸಿಕೊಂಡಿತ್ತು. ಆ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ, ಕೋರ್ಸ್ ನೋಂದಣಿಗಾಗಿ ದಾಖಲೆಗಳನ್ನು ಕೇಳಲಾಗಿತ್ತು. ಅದರಂತೆ ದೂರುದಾರರು ತಮ್ಮ ಕೆವೈಸಿ ವಿವರ ಹಾಗೂ ಗುರುತಿನ ಚೀಟಿಯನ್ನು ಕಳುಹಿಸಿ ಹೆಸರು ನೋಂದಾಯಿಸಿಕೊಂಡಿದ್ದರು.
ಆನ್‌ಲೈನ್ ತರಗತಿ ನೆಪದಲ್ಲಿ ₹1.27 ಲಕ್ಷ ವರ್ಗಾವಣೆ:
“AI IMAGING FOR HEALTHCARE PROFESSIONALS NEMI-COURSE – 46” ಹೆಸರಿನಲ್ಲಿ ಪ್ರತಿದಿನ ಸಂಜೆ 6:00 ರಿಂದ 7:30 ರವರೆಗೆ ಆನ್‌ಲೈನ್ ತರಗತಿಗಳು ನಡೆಯಲಿದ್ದು, ಇದಕ್ಕಾಗಿ ಮುಂಗಡವಾಗಿ ಶುಲ್ಕ ಪಾವತಿಸುವಂತೆ ಆರೋಪಿಗಳು ಸೂಚಿಸಿದ್ದರು. ಇದನ್ನು ನಂಬಿದ ದೂರುದಾರರು ವಂಚಕರು ನೀಡಿದ ಬ್ಯಾಂಕ್ ಖಾತೆಗಳಿಗೆ ನೆಫ್ಟ್ ಮೂಲಕ ಎರಡು ಹಂತಗಳಲ್ಲಿ ಹಣ ವರ್ಗಾಯಿಸಿದ್ದಾರೆ:
ಎಪ್ರಿಲ್ 30, 2026: ₹10,000 ಮತ್ತು ಮೇ 03, 2026: ₹1,17,500 ಹೀಗೆ AMSKILLS ECADEMY PRIVATE LTD (NEMI) ಎಂಬ ಹೆಸರಿನಲ್ಲಿ ಆನ್‌ಲೈನ್ ತರಗತಿ ನಡೆಸುವುದಾಗಿ ನಂಬಿಸಿ, ಒಟ್ಟು ₹1,27,500 ಹಣವನ್ನು ಪಡೆದು ವಂಚಿಸಿರುವ ಅಪರಿಚಿತ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ಮಂಗಳೂರು ಸೆನ್ ಠಾಣೆಗೆ ದೂರು ನೀಡಿದ್ದಾರೆ.






