ಸಾರಿಕಾ ಅಶೋಕ್ ರವರ “ಹೊಸ್ತಿಲು” ಕಾದಂಬರಿ ಬಿಡುಗಡೆ, ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ
Views: 183
ಕನ್ನಡ ಕರಾವಳಿ ಸುದ್ದಿ: ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ, ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಇದರ ಸಹಕಾರದೊಂದಿಗೆ ಶ್ರೀಮತಿ ಸಾರಿಕಾ ಅಶೋಕ್ ಅವರ ಕಾದಂಬರಿ ‘ಹೊಸ್ತಿಲು’ ಪುಸ್ತಕ ಬಿಡುಗಡೆ ಸಮಾರಂಭ ನವೆಂಬರ್ 1ರಂದು ಬಸ್ರೂರು ಮೂಡ್ಕೇರಿ ಶ್ರೀ ಆದಿನಾಥೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಕನ್ನಡಾಂಬೆ ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಅರ್ಪಿಸುವುದರ ಮೂಲಕ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆಯ ಕಾರ್ಯಕ್ರಮ ನಡೆಯಿತು.
ಜನ ಸೇವಾ ಟ್ರಸ್ಟ್ (ರಿ.) ಗಿಳಿಯಾರ್ ಇದರ ಅಧ್ಯಕ್ಷರಾದ ಶ್ರೀ ವಸಂತ ಗಿಳಿಯಾರ್ ಹೊಸ್ತಿಲು ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿ, ಕನ್ನಡ ಬದುಕಿನ ಪ್ರತಿ ಹೆಜ್ಜೆಯಲ್ಲೂ ಬೆಸೆದುಕೊಂಡಿರುವ ಅಸ್ಮಿತೆಯ ನಂಟು ತಮ್ಮ ಪ್ರತಿಭೆ, ಪರಿಶ್ರಮ, ಸಾಧನೆ ಮತ್ತು ಸೃಜನಶೀಲತೆಯ ಮೂಲಕ ಕನ್ನಡ ನಾಡಿನ ಕೀರ್ತಿ ಮತ್ತು ಬದುಕಿನ ಮೂಲವನ್ನು ತೆರೆದುಕೊಳ್ಳುತ್ತದೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ಎತ್ತರ ಮಟ್ಟದಲ್ಲಿ ಬೆಳೆಯಲಿ ಎಂದರು.
ಹಿರಿಯ ವಕೀಲರು ಹಾಗೂ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾದ ಶ್ರೀ ಎ.ಎಸ್.ಎನ್. ಹೆಬ್ಬಾರ್ ಸಭೆಯ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುಸ್ತಕ ಬಿಡುಗಡೆಯೊಂದಿಗೆ ಕನ್ನಡದ ಕಂಪನ್ನು ಮೂಡಿಸುವ ಅದ್ಭುತ ಕಾರ್ಯಕ್ರಮ ಇದಾಗಿದೆ. ಕನ್ನಡ ಕಲಿಯಲು ಯಾರೂ ಉದಾಸೀನ ಮಾಡಬಾರದು. ಕನ್ನಡ ಯಾರೂ ಸಹ ಕಲಿಯಬಹುದಾದ ಭಾಷೆ, ಕನ್ನಡ ಭಾಷೆಯಲ್ಲಿರುವ ಸಂಪತ್ತು ಯಾವ ಭಾಷೆಯಲ್ಲಿ ಇಲ್ಲ, ಕನ್ನಡದ ಸಂಸ್ಕಾರ ಭಾಷೆಯನ್ನು ಪೋಷಕರು ಬೆಳೆಸಿದಾಗ ಕನ್ನಡ ಇನ್ನಷ್ಟು ಎತ್ತರ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದರು.
ಖ್ಯಾತ ಸಂಗೀತ ನಿರ್ದೇಶಕ ಶ್ರೀ ರವಿ ಬಸ್ರೂರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇದು ಕೇವಲ ಕಾದಂಬರಿ ಅಲ್ಲ, ಸಿನಿಮಾ ಮಾಡುವ ತಾಕತ್ತು ಸಹ ಇದರಲ್ಲಿ ಇದೆ. ಇದೊಂದು ಅನುಭವ ಆಧಾರದೊಂದಿಗೆ ರಚಿತವಾದ ಕಾದಂಬರಿ, ಈ ಮೂಲಕ ಅದ್ಭುತ ಪ್ರತಿಭೆಗಳು ಹೊರಬರಲಿ ತಮ್ಮ ಮೂಲಕ ಎಲ್ಲರಿಗೂ ಪ್ರಚೋಧನೆಯಾಗಲಿ ಎಂದರು.
ಕಾದಂಬರಿ ರಚನೆಗಾರರಾದ ಸಾರಿಕಾ ಅಶೋಕ್ ಮಾತನಾಡಿ, ಮನುಷ್ಯ ಸಂಬಂಧಗಳ ಸಂಕೀರ್ಣತೆಗಳು ಮತ್ತು ಬದುಕಿನ ನೈಜ ಸತ್ಯಗಳು ಈ ಕಾದಂಬರಿಯ ವಸ್ತುವಾಗಿ ರೂಪುಗೊಂಡಿದೆ. ಕಷ್ಟ ಸುಖಗಳ ನಡುವೆಯೂ ಕಳೆದುಕೊಳ್ಳದ ಮಾನವೀಯ ಮೌಲ್ಯಗಳು ಹಾಗೂ ಜೀವನದಲ್ಲಿ ಎದುರಾಗುವ ಆತ್ಮಾವಲೋಕನದ ಕ್ಷಣಗಳನ್ನು ಕೊಡುವ ಪ್ರಯತ್ನ ಈ ಕಾದಂಬರಿಯಲ್ಲಿದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕರು ಹಾಗೂ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ಘಟಕದ ಶ್ರೀ ದಿನಕರ ಆರ್. ಶೆಟ್ಟಿ ಕೃತಿ ಪರಿಚಯಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾದ ಶ್ರೀ ಎ. ಎಸ್.ಎನ್.ಹೆಬ್ಬಾರ್ ಅವರನ್ನು ಎಲ್ಲರ ಪರವಾಗಿ ಶರ್ಮಿಳಾ ಯಗೀಶ್ ಸನ್ಮಾನಿಸಿದರು.
ಬಸ್ರೂರು ಮೂಡ್ಕೇರಿ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಇದರ ಅಧ್ಯಕ್ಷರಾದ ಶ್ರೀ ಬಿ. ಟಿ. ಮಂಜುನಾಥ್, ನೇಕಾರರ ಸಹಕಾರಿ ಸಂಘ, ಬಸ್ರೂರು ನಿರ್ದೇಶಕರಾದ ಶ್ರೀ ರಾಜೇಂದ್ರ ಶೆಟ್ಟಿಗಾರ್, ವಾಸ್ತು ತಜ್ಞ,ಯಕ್ಷಗಾನ ಪ್ರಸಂಗಕರ್ತರಾದ ಡಾ.ಬಸವರಾಜ ಶೆಟ್ಟಿಗಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ಶೇಖರ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಸಂದರ್ಭೋಚಿತವಾಗಿ ಮಾತನಾಡಿದರು.
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶ್ರೀ ಮಂಜುನಾಥ ಕೆ. ಎಸ್ ಸ್ವಾಗತಿಸಿದರು. ನರಸಿಂಹ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಜ್ಞಾ ಮತ್ತು ಸಂಗಡಿಗರಿಂದ ಪ್ರಾರ್ಥನೆ ನೆರವೇರಿಸಿದರು. ಅಶೋಕ್ ಕೆರೆಕಟ್ಟೆ ವಂದಿಸಿದರು. ಕೋಟೇಶ್ವರ ಆರ್ ವಿ ಮೆಲೋಡಿಸ್ ತಂಡದವರಿಂದ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಿತು. ಕಾದಂಬರಿ ರಚನೆಗೆ ಮತ್ತು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.












