ಬಡಗುತಿಟ್ಟಿನ ಹಿರಿಯ ಯಕ್ಷಗಾನ ಭಾಗವತ ಹೆರಂಜಾಲು ಗೋಪಾಲ ಗಾಣಿಗರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
Views: 13
ಕನ್ನಡ ಕರಾವಳಿ ಸುದ್ದಿ: ಬಡಗುತಿಟ್ಟಿನ ಹೆಸರಾಂತ ಹಿರಿಯ ಯಕ್ಷಗಾನ ಭಾಗವತ ಹೆರಂಜಾಲು ಗೋಪಾಲ ಗಾಣಿಗ ಅವರಿಗೆ 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಯಕ್ಷಗಾನ ಕ್ಷೇತ್ರದಲ್ಲಿ 45 ವರ್ಷಗಳ ಸೇವೆ ಸಲ್ಲಿಸಿದ ಹಿರಿಯ ಭಾಗವತ ಗೋಪಾಲ ಗಾಣಿಗರು ಬೈಂದೂರು ತಾಲೂಕಿನ ನಾಗೂರು ಸಮೀಪದವರು. ಲಯಬ್ರಹ್ಮ, ಸಂಪ್ರದಾಯಬದ್ಧರಾಗಿದ್ದು, ಯಕ್ಷಗಾನದ ದಶಾವತಾರಿ ಎಂದು ಗುರುತಿಸಲಾಗುತ್ತದೆ.
1984ರಲ್ಲಿ ಯಕ್ಷಗಾನ ವೃತ್ತಿಪರ ಮೇಳದಲ್ಲಿ ಕಲಾವಿದರಾಗಿ ಯಕ್ಷಗಾನ ಕಲೆಯಲ್ಲಿ ತೊಡಗಿಸಿಕೊಂಡ ಹೆರಂಜಾಲು ಗೋಪಾಲ ಗಾಣಿಗ ಅವರು ಖ್ಯಾತ ಯಕ್ಷಗಾನ ಕಲಾವಿದ ದಿ. ಹೆರಂಜಾಲು ವೆಂಕಟರಮಣ ಗಾಣಿಗ ಪುತ್ರ. ತಂದೆಯ ಹಾದಿಯನ್ನೇ ತುಳಿದ ಪುತ್ರ ಗೋಪಾಲ ಗಾಣಿಗರು ನಾಲ್ಕನೇ ತರಗತಿಯೇ ವಿದ್ಯಾಭ್ಯಾಸ ಮೊಟಕುಗೊಳಿಸಿ ಕಲಾ ಸೇವೆಯಲ್ಲಿ ತೊಡಗಿಸಿಕೊಂಡವರು. ಬಡಗುತಿಟ್ಟಿನ ಪ್ರಮುಖ ಯಕ್ಷಗಾನ ಮೇಳಗಳಲ್ಲಿ ತಿರುಗಾಟ ನಡೆಸಿ, ತಮ್ಮ ವಿಶಿಷ್ಟ ಕಂಠಸಿರಿ ಹಾಗೂ ಸಾಂಪ್ರದಾಯಿಕ ಶೈಲಿಯ ಹಾಡುಗಾರಿಕೆಯಿಂದ ಪ್ರಸಿದ್ಧರಾದವರು. ಶ್ರೀ ಮಾರಣಕಟ್ಟೆ ಕಮಲಶಿಲೆ, ಮಂದಾರ್ತಿ, ಸೌಕೂರು, ಸಾಲಿಗ್ರಾಮ ಹಾಗೂ ಶಿರಸಿ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ. ಯುವಕರಾಗಿರುವಾಗಲೇ ಅವರು ಡಾ. ಶಿವರಾಮ ಕಾರಂತರ ಯಕ್ಷಬ್ಯಾಲೆ ತಂಡದ ಮೂಲಕ ವಿದೇಶಗಳಲ್ಲಿಯೂ ಯಕ್ಷಗಾನ ಪ್ರದರ್ಶನದಲ್ಲಿ ಭಾಗವಹಿಸಿದ್ದರು.ಪಾರ್ತಿಸುಬ್ಬನವರ ದಶಮ ಕೃತಿಯಲ್ಲಿ ಆಯ್ದ ಪ್ರಸಂಗದ ಆಯ್ದ ಭಾಗಗಳನ್ನು ಅರ್ಥಸಹಿತ ಮರುಪ್ರಕಟಿಸಿದ್ದಾರೆ. ಖರದೂಷಣ ಕಾಳಗ, ಚೂಡಾಮಣಿ, ವಾಲಿ ಸುಗ್ರೀವ, ಇಂದ್ರಜಿತು ಎಂಬ ಪ್ರಸಂಗ ಗ್ರಂಥಗಳನ್ನು ಪ್ರಕಟಿಸಿದ್ದಾರೆ
ಅವರು ತಮ್ಮ ಹುಟ್ಟೂರು ಹೆರಂಜಾಲಿನಲ್ಲಿ ಯಕ್ಷಗಾನ ಪ್ರತಿಷ್ಠಾನವನ್ನು ಸ್ಥಾಪಿಸಿ ಆಸಕ್ತ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯ ತರಬೇತಿ ನೀಡುತ್ತಿದ್ದಾರೆ.
1997ರಲ್ಲಿ ದಿ. ಹೆರಂಜಾಲು ವೆಂಕಟರಮಣ ಗಾಣಿಗ ಅವರು ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದರು, ಮಗ ಗೊಪಾಲ ಗಾಣಿಗರೂ ಅದೇ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ವಿಶೇಷ. ಗೋಪಾಲ ಗಾಣಿಗರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರ ಮನ್ನಣೆಗಳು ದೊರೆತಿದ್ದು, ಯಕ್ಷಗಾನ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.






