ಕರಾವಳಿ

ಗೋಕರ್ಣ ತದಡಿ ಬಂದರಿನಲ್ಲಿ ದುರಂತ: ಬೋಟ್‌ನಲ್ಲಿ ಉಸಿರುಗಟ್ಟಿ ಮೂವರು ಮೀನುಗಾರರ ಸಾವು

Views: 46

ಕನ್ನಡ ಕರಾವಳಿ ಸುದ್ದಿ: ಬಂದರಿನಲ್ಲಿ ಬೋಟ್‌ನೊಳಗೆ ಉಸಿರುಗಟ್ಟಿ ಮೂವರು ಮೀನುಗಾರರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ನೌಶಾದ್ (48), ಅಮೀನ್ (40) ಮತ್ತು ಅಮನ್ (26) ಮೃತ ಮೀನುಗಾರರು.

ಘಟನೆಯಲ್ಲಿ ಅಸ್ವಸ್ಥಗೊಂಡ ಅಬ್ದುಲ್ ಯಾಕುಬ್ ದಾಡಿಯಾ (60) ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ತದಡಿಯ ಕುಚೈಮಾ ಬೋಟ್‌ನಲ್ಲಿ ಮೀನುಗಾರರು ಕೆಲಸ ಮಾಡುತ್ತಿದ್ದರು. ಮೀನುಗಾರಿಕೆ ಮುಗಿಸಿ ‘ಚಮನ್’ ಮೀನು ಹಿಡಿದು ಬಂದರಿಗೆ ವಾಪಸಾಗಿದ್ದರು. ಬಳಿಕ ಮೀನು ಸಂಗ್ರಹಿಸುವ ಸ್ಥಳಕ್ಕೆ ಇಳಿದು ಮೀನನ್ನು ಖಾಲಿ ಮಾಡಿದ್ದರು. ನಂತರ ಮೀನು ಸಂಗ್ರಹಿಸಿದ್ದ ಜಾಗವನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಮೀನುಗಳ ವಾಸನೆ ಅಥವಾ ವಿಷಕಾರಿ ಅನಿಲದಿಂದ ಉಸಿರಾಟಕ್ಕೆ ತೊಂದರೆಯಾಗಿ ಮೀನುಗಾರರು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ. ಈ ವೇಳೆ ಮೂವರು ಮೃತಪಟ್ಟಿದ್ದು, ಇತರ ಮೀನುಗಾರರನ್ನು ರಕ್ಷಿಸಲಾಗಿದೆ. ಅಸ್ವಸ್ಥಗೊಂಡ ಅಬ್ದುಲ್ ಯಾಕುಬ್ ಅವರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರೆದಿದೆ. ಘಟನೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ. ಮೀನು ಸಂಗ್ರಹಿಸುವ ಸ್ಥಳದಲ್ಲಿ ಉಸಿರುಗಟ್ಟುವಿಕೆಗೆ ನಿಖರ ಕಾರಣವೇನು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

Related Articles

Back to top button
error: Content is protected !!