ಧಾರ್ಮಿಕ

ಕೋಲ್ಕತ್ತ:ದುರ್ಗಾಪೂಜಾ ಉತ್ಸವ ಮಂಟಪದಲ್ಲಿ ಕಾಲ್ತುಳಿತ: 19 ಜನರು ಸಾವು, 35 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

Views: 14

ಕನ್ನಡ ಕರಾವಳಿ ಸುದ್ದಿ: ಉತ್ತರ ಕೋಲ್ಕತ್ತದ ಚೋರ್ಬಗನ್‌ನಲ್ಲಿ ವಾರ್ಷಿಕ ದುರ್ಗಾ ಪೂಜಾ ಉತ್ಸವ ಮಂಟಪದಲ್ಲಿ ಶನಿವಾರ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 19 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಗಂಭೀರವಾಗಿ ಗಾಯಗೊಂಡ 35 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರಲ್ಲಿ 19 ಜನರು ಮೃತಪಟ್ಟಿದ್ದಾರೆ. ಗಾಯಾಳುಗಳು ಮತ್ತು ಸಾವಿನ ಸಂಖ್ಯೆ ಇನ್ನೂ ಹೆಚ್ಚಬಹುದು ಎಂದು ಮೂಲಗಳು ಹೇಳಿವೆ.

ವಾರ್ಷಿಕ ದುರ್ಗಾ ಪೂಜಾ ಉತ್ಸವದಲ್ಲಿ ಭಾಗವಹಿಸಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಮಳೆ ಸುರಿಯಲು ಆರಂಭವಾಗುತ್ತಿದ್ದಂತೆ, ಮಂಟಪದ ಹೊರೆಗೆ ಕಾಯುತ್ತಿದ್ದ ಜನರು ಒಮ್ಮಲೆ ಒಳಗೆ ನುಗ್ಗಿದರು. ಈ ವೇಳೆ ಉಂಟಾದ ನೂಕು ನುಗ್ಗಲಿನಿಂದ ಕಾಲ್ತುಳಿತ ಉಂಟಾಯಿತು. ಭಾರಿ ಜನದಟ್ಟಣೆಯಿಂದ ನಿರ್ಗಮನ ದ್ವಾರ ಕುಸಿಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮತ್ತು ಮುಖ್ಯ ಕಾರ್ಯದರ್ಶಿ ಮನೋಜ್ ಅಗರ್‌ವಾಲ್‌, ಆರೋಗ್ಯ ಸಚಿವ ಸಾರದ್ವತ್‌ ಮುಖರ್ಜಿ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು.

‘ಚೋರ್ಬಗನ್‌ ಕಾಲ್ತುಳಿತವು ದಿಗ್ಭ್ರಮೆ ಮೂಡಿಸಿದೆ’ ಎಂದು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪರಿಹಾರ ಘೋಷಣೆ: ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರಿಗೆ ₹50 ಸಾವಿರ ನೆರವು ಪ್ರಕಟಿಸಲಾಗಿದೆ.

’ಕಾಲ್ತುಳಿತ ತೀವ್ರ ದುಃಖಕರ ಘಟನೆ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ಜತೆಗೆ ಸರ್ಕಾರ ನಿಲ್ಲಲಿದೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ’ ಎಂದು ಪ್ರಧಾನಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಕಾಲ್ತುಳಿತದ ಬೆನ್ನಲ್ಲೇ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಪಶ್ಚಿಮ ಬಂಗಾಳದಲ್ಲಿ ಭಾನುವಾರ ನಿಗದಿಯಾಗಿದ್ದ ತಮ್ಮ ಕಾರ್ಯಕ್ರಮಗಳನ್ನು ಮುಂದೂಡಿದ್ದಾರೆ.

Related Articles

Back to top button
error: Content is protected !!