ಕುಂದಾಪುರ: ನಿರ್ಮಾಣ ಹಂತದ ವಂಡ್ಸೆ ದೇವಸ್ಥಾನದ ಕೆಲಸದ ವೇಳೆ ಶಿಲ್ಪಿ ಆಯತಪ್ಪಿ ಬಿದ್ದು ಸಾವು
Views: 149
ಕುಂದಾಪುರ: ನಿರ್ಮಾಣ ಹಂತದ ದೇವಸ್ಥಾನದಲ್ಲಿ ಶಿಲ್ಪಿ ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಯುವಕನೊಬ್ಬ ಮೃತಪಟ್ಟ ದಾರುಣ ಘಟನೆ ವಂಡ್ಸೆ ಗ್ರಾಮದ ಕಂಬಳಗದ್ದೆ ಬಳಿ ನಡೆದಿದೆ.
ಕಾರ್ಕಳ ತಾಲೂಕಿನ ಕುಕ್ಕಂದೂರು ಗ್ರಾಮದ ನಿವಾಸಿ ಶಿವ ಅವರ ಮಗ ಶರತ್ ಕುಮಾರ್ (30) ಮೃತಪಟ್ಟ ದುರ್ದೈವಿ. ಕಳೆದ ಒಂದು ತಿಂಗಳಿಂದ ಇವರು ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮದ ಕಂಬಳಗದ್ದೆ ಬಳಿಯ ದೇವಸ್ಥಾನದಲ್ಲಿ ಶಿಲ್ಪಿ ಕೆಲಸ ಮಾಡಿಕೊಂಡಿದ್ದರು.
ಅಕ್ಟೋಬರ್ 16 ರಂದು ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಅವರ ಹಣೆಗೆ ಹಾಗೂ ಎಡ ಭುಜಕ್ಕೆ ಒಳ ಜಖಂ ಆಗಿದ್ದು, ದೇಹದ ಇತರೆ ಅಂಗಾಂಗಗಳಿಗೂ ಗಂಭೀರ ಪೆಟ್ಟಾಗಿತ್ತು.ತಕ್ಷಣ ಅವರನ್ನು ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಂದೇ ರಾತ್ರಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಮೃತರ ತಂದೆ ನೀಡಿದ ದೂರಿನ ಮೇರೆಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.






