ಮೈಸೂರು ದಸರಾ ವೇಳೆ ಬಲೂನ್ ಮಾರಾಟದ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ: ಆರೋಪಿಗೆ ಮರಣದಂಡನೆ
Views: 57
ಕನ್ನಡ ಕರಾವಳಿ ಸುದ್ದಿ: ಮೈಸೂರು ದಸರಾ ಮಹೋತ್ಸವದ ವೇಳೆ ಬಲೂನ್ ಮಾರಾಟ ಮಾಡಲು ಬಂದಿದ್ದ 9 ವರ್ಷದ ಬಾಲಕಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿ ಕಾರ್ತಿಕ್ಗೆ (32) ಮೈಸೂರಿನ ನ್ಯಾಯಾಲಯವು ಮರಣದಂಡನೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಕಳೆದ ದಸರಾದಲ್ಲಿ ಬಲೂನ್ ಮಾರಾಟ ಮಾಡಲು ಕುಟುಂಬದೊಂದಿಗೆ ಬಂದಿದ್ದ ಉತ್ತರ ಕರ್ನಾಟಕದ ಹತ್ತು ವರ್ಷದ ಬಾಲಕಿಯನ್ನು ಅಪಹರಿಸಿ ದೊಡ್ಡಕೆರೆ ಮೈದಾನದ ಬಳಿ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ ಪ್ರಕರಣದಲ್ಲಿ ಮೈಸೂರಿನ ಸಿದ್ದಲಿಂಗಪುರದ ನಿವಾಸಿ ಕಾರ್ತಿಕ್ (31) ದೋಷಿ ಎಂದು ನ್ಯಾಯಾಲಯ ಹೇಳಿದೆ.
ಬಾಲಕಿಯ ತಾಯಿ ನೀಡಿದ ದೂರು ಆಧರಿಸಿ ಪೋಕ್ಸೊ ಅಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಆನಂದ್ ಹುಗಾಡೆ ಈ ತೀರ್ಪು ನೀಡಿದ್ದಾರೆ.
2025ರ ಅ.9ರಂದು ಇಟ್ಟಿಗೆಗೂಡಿನ ಬಳಿಯ ಚರಂಡಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ನಜರ್ಬಾದ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರ್ತಿಕ್ನನ್ನು ಬಂಧಿಸಿದ್ದರು.
ಮಹಜರು ವೇಳೆ ಸಿದ್ದಲಿಂಗಪುರಕ್ಕೆ ಕರೆದೊಯ್ದು ವಾಪಸ್ ಬರುವಾಗ ಆತ ಮೇಟಗಳ್ಳಿ ಬಳಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಕಾಲಿಗೆ ಗುಂಡು ಹಾರಿಸಿದ್ದರು. ತನಿಖೆಯ ಬಳಿಕ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಎಂಎಂಸಿಆರ್ಐ ವಿಧಿವಿಜ್ಞಾನ ವಿಭಾಗದಲ್ಲಿ ನಡೆದ ಮರಣೋತ್ತರ ಪರೀಕ್ಷೆಯ ವರದಿ, ಬೆಂಗಳೂರು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಡೆಸಿದ ಡಿಎನ್ಎ ಪರೀಕ್ಷೆ ಹಾಗೂ ಎಫ್ಎಸ್ಎಲ್ ವರದಿಗಳನ್ನು ಗಮನಿಸಿ ನ್ಯಾಯಾಲಯ ಕಾರ್ತಿಕ್ನನ್ನು ದೋಷಿ ಎಂದು ಹೇಳಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಸರ್ಕಾರಿ ಅಭಿಯೋಜಕಿ ಕೆ.ಬಿ. ಜಯಂತಿ ಸರ್ಕಾರದ ಪರ ವಾದ ಮಂಡಿಸಿದ್ದರು. ಜಿಲ್ಲಾ ಕಾನೂನು ಘಟಕದ ಮಾಚಂಗಡ ಎಸ್.ನವೀನ್ ಆರೋಪಿ ಪರವಾಗಿ ವಕಾಲತ್ತು ವಹಿಸಿದ್ದರು.






