ಹಾವು ಕಡಿತದ ನಾಟಕವಾಡಿ ಪತಿ ಕೊಲೆ, ಪತ್ನಿ, ಪ್ರಿಯಕರನಿಗೆ ಮರಣದಂಡನೆ
Views: 19
ಕನ್ನಡ ಕರಾವಳಿ ಸುದ್ದಿ:ಹಾವು ಕಡಿತದ ಸೋಗಿನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಉತ್ತರ ಪ್ರದೇಶದ ಮೀರತ್ನಲ್ಲಿ ಪತಿಯನ್ನೇ ಹತ್ಯೆಗೈದು, ಹಾವು ಕಡಿತದಿಂದ ಸಾವು ಸಂಭವಿಸಿದೆ ಎಂದು ಬಿಂಬಿಸಲು ಯತ್ನಿಸಿದ್ದ ಪತ್ನಿ ರವಿತಾ ಹಾಗೂ ಆಕೆಯ ಪ್ರಿಯಕರ ಅಮರ್ದೀಪ್ಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ.

ಮೀರತ್ನ ಅಮಿತ್ ಕಶ್ಯಪ್ ಅಲಿಯಾಸ್ ಮಿಕ್ಕಿ ಕಶ್ಯಪ್ ಕೊಲೆ ಪ್ರಕರಣದಲ್ಲಿ ಪತ್ನಿ ರವಿತಾ ಹಾಗೂ ಆಕೆಯ ಪ್ರಿಯಕರ ಅಮರ್ದೀಪ್ ತಪ್ಪಿತಸ್ಥರೆಂದು ಸಾಬೀತಾಗಿದ್ದಾರೆ.
2025ರ ಏಪ್ರಿಲ್ 12 ಮತ್ತು 13ರ ನಡುವಿನ ರಾತ್ರಿ ಅಮಿತ್ ಕಶ್ಯಪ್ ತಮ್ಮ ಮನೆಯಲ್ಲೇ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದರು. ಅಚ್ಚರಿಯ ಸಂಗತಿಯೆಂದರೆ, ಮೃತದೇಹದ ಪಕ್ಕದಲ್ಲೇ ಜೀವಂತ ಹಾವೊಂದು ಪತ್ತೆಯಾಗಿತ್ತು. ಹೀಗಾಗಿ ಹಾವು ಕಡಿತದಿಂದಲೇ ಅಮಿತ್ ಮೃತಪಟ್ಟಿದ್ದಾರೆ ಎಂಬ ಅನುಮಾನ ಮೂಡಿಸಲಾಗಿತ್ತು.
ಆದರೆ, ಕುಟುಂಬಸ್ಥರಿಗೆ ಸಾವಿನ ಬಗ್ಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಗೆ ಆಗ್ರಹಿಸಿದ್ದರು. ಈ ವೇಳೆ ಅಮಿತ್ ಹಾವು ಕಡಿತದಿಂದ ಮೃತಪಟ್ಟಿಲ್ಲ, ಬದಲಿಗೆ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬುದು ಬೆಳಕಿಗೆ ಬಂದಿತ್ತು.

ಪೊಲೀಸರ ತನಿಖೆಯಲ್ಲಿ ಪತ್ನಿ ರವಿತಾ ಹಾಗೂ ಆಕೆಯ ಪ್ರಿಯಕರ ಅಮರ್ದೀಪ್ ಸೇರಿಕೊಂಡು ಅಮಿತ್ಗೆ ನಿದ್ರೆ ಮಾತ್ರೆ ನೀಡಿ, ಬಳಿಕ ಹತ್ಯೆಗೈದು, ಅದನ್ನು ಹಾವು ಕಡಿತದ ಸಾವೆಂದು ಬಿಂಬಿಸಲು ಸಂಚು ರೂಪಿಸಿದ್ದರು ಎಂಬ ಆರೋಪ ಪ್ರಕರಣದ ಪ್ರಮುಖ ಭಾಗವಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅಕ್ಟೋಬರ್ 7ರಂದು ಇಬ್ಬರನ್ನೂ ದೋಷಿಗಳೆಂದು ತೀರ್ಮಾನಿಸಿತ್ತು. ಇದೀಗ ಅಕ್ಟೋಬರ್ 16ರಂದು ಇಬ್ಬರಿಗೂ ಮರಣದಂಡನೆ ವಿಧಿಸಿ ತೀರ್ಪು ಪ್ರಕಟಿಸಿದೆ ಎಂದು ವರದಿಯಾಗಿದೆ.
ಹಾವು ಕಡಿತದ ನಾಟಕವಾಡಿ ಕೊಲೆಯನ್ನು ಮುಚ್ಚಿಹಾಕಲು ನಡೆಸಿದ ಸಂಚು ಕೊನೆಗೂ ಬಯಲಾಗಿದ್ದು, ಪತಿ ಕೊಲೆ ಪ್ರಕರಣದಲ್ಲಿ ಪತ್ನಿ ಮತ್ತು ಆಕೆಯ ಪ್ರಿಯಕರನಿಗೆ ಗಲ್ಲು ಶಿಕ್ಷೆ ವಿಧಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.






