ಬಸ್-ಲಾರಿ ಮುಖಾಮುಖಿ ಡಿಕ್ಕಿ: ನಾಲ್ವರು ಸಾವು
Views: 16
ಕನ್ನಡ ಕರಾವಳಿ ಸುದ್ದಿ: ಪಿರಿಯಾಪಟ್ಟಣದ ಹೊರ ವಲಯದ ಕಿರನಲ್ಲಿ ಗೇಟ್ ಬಳಿ ಶುಕ್ರವಾರ ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, 35ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಿಎಂ ರಸ್ತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರಿನಿಂದ ಕೇರಳಂನತ್ತ ತೆರಳುತ್ತಿದ್ದ ಕಾವೇರಿ ಹೆಸರಿನ ಖಾಸಗಿ ಸ್ಲೀಪರ್ ಕೋಚ್ ಬಸ್ಗೆ ಕಿರನಲ್ಲಿ ಗೇಟ್ ಬಳಿ ಲಾರಿ ಡಿಕ್ಕಿ ಹೊಡೆದಿದೆ. ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಾಯಾಳುಗಳನ್ನು ಆಂಬುಲೆನ್ಸ್ಗಳ ಮೂಲಕ ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆ ಹಾಗೂ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಅಪಘಾತದ ತೀವ್ರತೆಗೆ ಬಸ್ನಲ್ಲಿದ್ದ ಹಲವಾರು ಪ್ರಯಾಣಿಕರಿಗೆ ಬೆನ್ನುಮೂಳೆ, ಕೈಕಾಲು, ಸೊಂಟ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳ ಸ್ಥಿತಿಗತಿಯನ್ನು ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಪರಿಶೀಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಕೇರಳಂ ಮೂಲದವರೆಂದು ಗುರುತಿಸಲಾಗಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯ ನಿವಾಸಿಗಳು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಅಪಘಾತದ ತೀವ್ರತೆಗೆ ಬಸ್ ಜಖಂಗೊಂಡಿದ್ದರಿಂದ ಒಳಗೆ ಸಿಲುಕಿದ್ದ ಪ್ರಯಾಣಿಕರನ್ನು ಹೊರತೆಗೆದು ಗಾಯಾಳುಗಳ ರಕ್ಷಣೆಗೆ ಹರಸಾಹಸ ಪಟ್ಟರು. ಬಳಿಕ ಬಸ್ನ ತುರ್ತು ಬಾಗಿಲು ತೆರೆದು ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆದರು.
ಗಾಯಾಳುಗಳನ್ನು ತಕ್ಷಣ ಆಂಬುಲೆನ್ಸ್ಗಳ ಮೂಲಕ ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು. ಗಂಭೀರವಾಗಿ ಗಾಯಗೊಂಡವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ರವಾನಿಸಲಾಯಿತು. ಅಪಘಾತದಲ್ಲಿ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಒಂದು ಕಾಲು ಬಸ್ನೊಳಗೆ ಸಿಲುಕಿಕೊಂಡಿದ್ದರಿಂದ ಮೃತದೇಹವನ್ನು ಹೊರತೆಗೆಯಲು ಹೆಚ್ಚಿನ ಕಾರ್ಯಾಚರಣೆ ನಡೆಸಲಾಯಿತು.
ಘಟನೆಯಿಂದಾಗಿ ಹೆದ್ದಾರಿ ವಾಹನ ಸಂಚಾರ ದಟ್ಟಣೆ ಉಂಟಾಯಿತು. ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಬಳಿಕ ಕ್ರೇನ್ ಹಾಗೂ ಜೆಸಿಬಿ ಯಂತ್ರಗಳ ನೆರವಿನಿಂದ ಅಪಘಾತಕ್ಕೀಡಾದ ಬಸ್ ಮತ್ತು ಲಾರಿಯನ್ನು ರಸ್ತೆಯ ಬದಿಗೆ ಸ್ಥಳಾಂತರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.






