ಗೆಳತಿ ಜೊತೆ ಸಿಕ್ಕಿಬಿದ್ದ ಪತಿ: ಕಾರಿನ ಬಾನೆಟ್ ಮೇಲೆ ಬಿದ್ದ ಪತ್ನಿಯನ್ನು ಎಳೆದೊಯ್ದ ಪತಿ!
Views: 106
ಕನ್ನಡ ಕರಾವಳಿ ಸುದ್ದಿ: ಗೆಳತಿ ಜೊತೆ ಸಿಕ್ಕಿಬಿದ್ದ ಪತಿಯೊಬ್ಬ ಕಾರಿನ ಬಾನೆಟ್ ಮೇಲೆ ಜೋತು ಬಿದ್ದ ತನ್ನ ಪತ್ನಿಯನ್ನು ನೂರು ಮೀಟರ್ ದೂರದಷ್ಟು ಚಲಾಯಿಸಿಕೊಂಡು ಹೋದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಇತರ ವಾಹನ ಸವಾರರು ಈ ಘಟನೆಯನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಅಲ್ಲದೆ, ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ ಮಹಿಳೆಯ ಪ್ರಾಣ ಕಾಪಾಡಿದ್ದಾರೆ. ಬಳಿಕ ಪತಿ ಮತ್ತು ಆತನ ಗೆಳತಿ ಎಂದು ಹೇಳಲಾದ ಮಹಿಳೆಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಪತ್ನಿಯು ಇಬ್ಬರ ಮೇಲೆ ಹತ್ಯೆ ಯತ್ನ ದೂರು ನೀಡಿದ್ದಾರೆ.
ಘಟನೆಯ ವಿವರ: ಸ್ಥಳೀಯ ಮೂಲಗಳ ಪ್ರಕಾರ, ತನ್ನ ಪತಿ ಇನ್ನೊಬ್ಬ ಮಹಿಳೆಯೊಂದಿಗೆ ಕಾರಿನಲ್ಲಿ ಓಡಾಡುತ್ತಿರುವುದನ್ನು ಪತ್ನಿ ಕಂಡಿದ್ದಾಳೆ. ಆಕೆ ಕಾರನ್ನು ನಿಲ್ಲಿಸಲು ಗಂಡನಿಗೆ ಸೂಚಿಸಿದ್ದಾಳೆ. ಆದರೆ, ಪತಿರಾಯ ಕೋಪದಲ್ಲಿ ಕಾರನ್ನು ಹಾಗೆಯೇ ಚಲಾಯಿಸಿಕೊಂಡು ಹೋಗಿದ್ದಾನೆ. ಈ ವೇಳೆ ಮಹಿಳೆ ಬಾನೆಟ್ ಮೇಲೆ ಜೋತುಬಿದ್ದಿದ್ದಾಳೆ. ಆದಾಗ್ಯೂ ಪತಿ ಮಾತ್ರ ಕಾರನ್ನು ನೂರು ಮೀಟರ್ಗೂ ಹೆಚ್ಚು ದೂರದವರೆಗೆ ಚಲಾಯಿಸಿಕೊಂಡು ಹೋಗಿದ್ದಾನೆ. ಇದನ್ನು ಗಮನಿಸಿದ ಪಕ್ಕದಲ್ಲಿದ್ದ ಮತ್ತೊಂದು ಕಾರು ಚಾಲಕ ನಿಲ್ಲಿಸಲು ಪ್ರಯತ್ನಿಸಿದ್ದಾನೆ. ಮುಂದೆ ಟ್ರಾಫಿಕ್ ಜಾಮ್ ಆಗಿದ್ದರಿಂದ ಪತಿ ಕಾರಿನ ವೇಗವನ್ನು ಕಡಿಮೆ ಮಾಡಿದಾಗ, ಅಲ್ಲಿದ್ದವರು ಕಾರನ್ನು ನಿಲ್ಲಿಸಿ ಮಹಿಳೆಯನ್ನು ಕಾಪಾಡಿದ್ದಾರೆ.
ಹತ್ಯೆ ಯತ್ನ ದೂರು ನೀಡಿದ ಪತ್ನಿ: ಕಾರಿನ ಬಾನೆಟ್ ಮೇಲೆ ಜೋತು ಬಿದ್ದರೂ ಕಾರು ಚಲಾಯಿಸಿಕೊಂಡು ಹೋದರು. ಪತಿ ಮತ್ತು ಆತನ ಗೆಳತಿ ನನ್ನನ್ನು ಹತ್ಯೆ ಮಾಡಲು ಉದ್ದೇಶಿಸಿದ್ದರು ಎಂದು ಆರೋಪಿಸಿ ಪತ್ನಿ ಲೋಹಿಯಾ ನಗರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ.
ಇಬ್ಬರೂ ನನ್ನನ್ನು ಪೊದೆಯೊಳಗೆ ತಳ್ಳಿ, ಕತ್ತು ಹಿಸುಕಲು ಪ್ರಯತ್ನಿಸಿದರು. ಹೀನಾಮಾನವಾಗಿ ನಿಂದಿಸಿ ನಂತರ ಸ್ಥಳದಿಂದ ಪರಾರಿಯಾಗಲು ಯತ್ನಿಸಿದರು. ಈ ವೇಳೆ ನಾನು ಕಾರಿನ ಬಾನೆಟ್ ಮೇಲೆ ಬಿದ್ದೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.
ಪತಿ ಮತ್ತು ಗೆಳತಿಯ ಬಂಧನ: ಕಾರಿನ ಬಾನೆಟ್ ಮೇಲೆ ಪತ್ನಿ ಬಿದ್ದಿದ್ದರೂ ಲೆಕ್ಕಿಸದೆ ಕಾರು ಚಲಾಯಿಸಿದ ವ್ಯಕ್ತಿಯನ್ನು ತಡೆದು ನಿಲ್ಲಿಸಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪತಿ ಮತ್ತು ಆತನ ಗೆಳತಿಯನ್ನು ಬಂಧಿಸಿದ್ದಾರೆ. ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ಅವರು ಘಟನೆಯನ್ನು ದೃಢಪಡಿಸಿದ್ದಾರೆ. ಪತಿ ನನ್ನ ಮೇಲೆ ಕಾರು ಚಲಾಯಿಸಿ ಕೊಲ್ಲಲು ಯತ್ನಿಸಿದ್ದಾನೆ ಎಂದು ಪತ್ನಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.






