ರೀಲ್ಸ್ ಹುಚ್ಚಾಟ! ರೈಲಿಗೆ ಸೀರೆಯ ಸೆರಗು ಕಟ್ಟಿ ರೈಲ್ವೆ ಹಳಿಯ ಮೇಲೆ ಮಹಿಳೆಯ ಡ್ಯಾನ್ಸ್
Views: 13
ಕನ್ನಡ ಕರಾವಳಿ ಸುದ್ದಿ: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕು ಎನ್ನುವ ಉದ್ದೇಶದಿಂದ ಲೈಕ್ಸ್, ವೀವ್ಸ್‌ಗಾಗಿ ಜೀವದ ಹಂಗು ತೊರೆದು ಹುಚ್ಚಾಟ ಮೆರೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮಹಿಳೆಯೊಬ್ಬಳು ನಿಂತಿದ್ದ ರೈಲಿಗೆ ಸೀರೆಯ ಸೆರಗು ಕಟ್ಟಿ ರೈಲ್ವೆ ಹಳಿಯ ಮೇಲೆ ಡ್ಯಾನ್ಸ್ ಮಾಡಿದ್ದಾಳೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಮಹಿಳೆಯ ವರ್ತನೆ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ಆಗಬೇಕು ಎನ್ನುವ ಉದ್ದೇಶದಿಂದ ಈ ರೀತಿಯ ಅಪಾಯಕಾರಿ ರೀಲ್ಸ್ ಮಾಡುವುದು ತಪ್ಪು, ಈಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಕಣ್ಣಿಗೆ ಗ್ಲಾಸ್ ಹಾಕಿ ಸೀರೆ ಧರಿಸಿದ್ದ ಮಹಿಳೆ ನಿಂತಿದ್ದ ರೈಲಿಗೆ ಸೀರೆ ಪಲ್ಲು ಕಟ್ಟಿ ಹಳಿಯ ಮೇಲೆ ನಿಂತು ರೀಲ್ಸ್ ಚಿತ್ರೀಕರಣ ಮಾಡಿದ್ದಾಳೆ.
ವೈರಲ್ ವಿಡಿಯೊದಲ್ಲಿ ಮಹಿಳೆ ಸೀರೆ ಮತ್ತು ಸನ್ ಗ್ಲಾಸ್ ಧರಿಸಿ ನಿಂತಿದ್ದು ರೈಲಿನ ಪಕ್ಕದಲ್ಲಿ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಈ ವಿಡಿಯೊ ಬಳಕೆದಾರರ ಟೀಕೆಗೆ ಗುರಿಯಾಗಿದೆ. ‘ರೀಲ್’ ಚಿತ್ರೀಕರಣಕ್ಕಾಗಿ ರೈಲು ಹಳಿಗಳನ್ನು ಬಳಸಿಕೊಂಡ ನಿರ್ಧಾರವನ್ನು ಹಲವರು ಪ್ರಶ್ನಿಸಿದ್ದಾರೆ. ಜನಪ್ರಿಯತೆ ಪಡೆಯುವ ಉದ್ದೇಶದಿಂದ ರೈಲು ಎಂಜಿನ್‌ನ ಹತ್ತಿರ ನಿಂತು ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ.
ಅನೇಕ ನೆಟ್ಟಿಗರು ರೈಲ್ವೆ ಸೇವೆ ಸಚಿವಾಲಯವನ್ನು ಟ್ಯಾಗ್ ಮಾಡಿ, ನಿಯಮ ಉಲ್ಲಂಘಿಸಿದ ಈ ಮಹಿಳೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ರೈಲು ಹಳಿಗಳು ಮತ್ತು ರೈಲುಗಳ ಸುತ್ತಮುತ್ತಲಿನ ಪ್ರದೇಶಗಳು ಚಿತ್ರೀಕರಣಕ್ಕೆ ಸುರಕ್ಷಿತ ಸ್ಥಳಗಳಲ್ಲ. ರೈಲು ನಿಂತಂತೆ ಕಂಡು ಬಂದರೂ ಗಂಭೀರ ಅಪಾಯ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.






