ಪತ್ನಿ ಸ್ನಾತಕೋತ್ತರ ಪದವಿ ಪಡೆದಿದ್ದಾಳೆ ಎಂಬ ಕಾರಣಕ್ಕೆ ಜೀವನಾಂಶ ನಿರಾಕರಿಸಲಾಗದು: ಹೈಕೋರ್ಟ್
Views: 0
ಕನ್ನಡ ಕರಾವಳಿ ಸುದ್ದಿ: ವಿಚ್ಛೇದನ ಪ್ರಕರಣಗಳಲ್ಲಿ ಪತ್ನಿ ಸ್ನಾತಕೋತ್ತರ ಪದವಿ ಪಡೆದಿದ್ದಾಳೆ ಎಂಬ ಕಾರಣಕ್ಕೆ ಆಕೆಗೆ ಜೀವನಾಂಶ ನಿರಾಕರಿಸಲಾಗದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಅಲ್ಲದೆ, ವಿಚ್ಛೇದನ ಪ್ರಕರಣದಲ್ಲಿ ಶಾಶ್ವತ ಜೀವನಾಂಶದ ಬೇಡಿಕೆ ತಿರಸ್ಕೃತವಾಗಿದ್ದರೂ, ಅದನ್ನು ಆಧಾರವಾಗಿ ಬಳಸಿ ಮಾಸಿಕ ಜೀವನಾಂಶ ನಿರಾಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಜೀವನಾಂಶ ನೀಡಲು ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ, ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಚಿಲ್ಲಕುರು ಸುಮಲತಾ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ವಿಚ್ಛೇದನ ಪ್ರಕರಣದಲ್ಲಿ ಶಾಶ್ವತ ಜೀವನಾಂಶ ತಿರಸ್ಕೃತವಾಗಿದ್ದು, ಪತಿಯ ಆರ್ಥಿಕ ಸಾಮರ್ಥ್ಯವನ್ನು ಪತ್ನಿ ಸಾಬೀತುಪಡಿಸಲು ವಿಫಲವಾದರೆಂಬ ಕಾರಣಕ್ಕೆ, ಸೆಕ್ಷನ್ 125ರಡಿ ಜೀವನಾಂಶ ಪಡೆಯುವ ಹಕ್ಕನ್ನು ಕಳೆದುಕೊಳ್ಳುವುದಿಲ್ಲ ಎಂದು ಪೀಠ ಹೇಳಿದೆ.
ಪತಿಯು ಖಾಸಗಿ ಸಂಸ್ಥೆಯಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಸುಮಾರು 29,000 ಆದಾಯ ಗಳಿಸುತ್ತಿರುವುದನ್ನು ಪರಿಗಣಿಸಿದ ಹೈಕೋರ್ಟ್, ಪತ್ನಿ ಮತ್ತು ಮಗನಿಗೆ ತಲಾ ತಿಂಗಳಿಗೆ 5,000 ರೂ. ನಿರ್ವಹಣಾ ಭತ್ಯೆ ಪಾವತಿಸುವಂತೆ ನಿರ್ದೇಶನ ನೀಡಿದೆ.
ಪ್ರಕರಣದಲ್ಲಿ ಪತ್ನಿಯ ಪರಿಷ್ಕರಣಾ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಾಲಯ, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಮಾರ್ಪಾಡು ಮಾಡಿದ್ದು, ಪತ್ನಿ ಎಂ.ಎ. ಪದವಿ ಹೊಂದಿದ್ದಾಳೆ ಎಂಬುದಷ್ಟೇ ಆಕೆಗೆ ನಿರ್ವಹಣಾ ಭತ್ಯೆ ನಿರಾಕರಿಸಲು ಕಾರಣವಾಗುವುದಿಲ್ಲ. ಆಕೆ ಉದ್ಯೋಗದಲ್ಲಿದ್ದಾಳೆ ಅಥವಾ ಸ್ವತಂತ್ರವಾಗಿ ಆದಾಯ ಗಳಿಸುತ್ತಿದ್ದಾಳೆ ಎಂಬುದನ್ನು ಪತಿ ಕೂಡ ಹೇಳಿಲ್ಲ ಎಂದು ಹೇಳಿದೆ.
ಪ್ರಕರಣದ ಹಿನ್ನೆಲೆ: ಪ್ರಕರಣದಲ್ಲಿರುವ ದಂಪತಿಗೆ, ಪತಿಯ ಕಿರುಕುಳದ ಕಾರಣದಿಂದ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿತ್ತು. ಆದರೆ, ಪತಿಯ ಆದಾಯದ ನಿಖರ ದಾಖಲೆಗಳನ್ನು ಸಲ್ಲಿಸಿಲ್ಲ ಎಂಬ ಕಾರಣಕ್ಕೆ 10 ಲಕ್ಷ ರೂ. ಶಾಶ್ವತ ಪರಿಹಾರ ನೀಡಬೇಕು ಎಂಬ ಪತ್ನಿಯ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ನಂತರ ಪತ್ನಿಯು ಸಿಆರ್ಪಿಸಿ 125ರ ಅಡಿಯಲ್ಲಿ ತನಗೆ 20,000 ರೂ. ಹಾಗೂ 11 ವರ್ಷದ ಮಗನಿಗೆ 10,000 ರೂ. ಜೀವನಾಂಶ ನೀಡಬೇಕು ಎಂದು ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಹುಬ್ಬಳ್ಳಿಯ ನ್ಯಾಯಾಲಯ ಮಗನಿಗೆ ತಿಂಗಳಿಗೆ 5,000 ರೂ. ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿ, ಪತ್ನಿಯ ಅರ್ಜಿಯನ್ನು ವಜಾಗೊಳಿಸಿತ್ತು.
ವಿಚ್ಛೇದನದ ವೇಳೆ ಶಾಶ್ವತ ಪರಿಹಾರ ಸಿಕ್ಕಿಲ್ಲ ಹಾಗೂ ಪತ್ನಿ ಎಂ.ಎ. ಪದವೀಧರೆಯಾಗಿದ್ದು, ಆಕೆಗೆ ದುಡಿದು ಜೀವಿಸುವ ಸಾಮರ್ಥ್ಯವಿದೆ ಎಂದು ಕೌಟುಂಬಿಕ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಇದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು.






