ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಶವ ಕಾರಿನಲ್ಲಿ ಪತ್ತೆ: ಪತ್ನಿ, ಅಪ್ರಾಪ್ತ ಮಗ ನಾಪತ್ತೆ, ಹಲವು ಅನುಮಾನ!
Views: 96
ಕನ್ನಡ ಕರಾವಳಿ ಸುದ್ದಿ: ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯೊಬ್ಬರು ಕೊಲೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆಯಾದ ವ್ಯಕ್ತಿಯ ಪತ್ನಿ ಹಾಗೂ ಅಪ್ರಾಪ್ತ ಮಗ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೃತರನ್ನು ಉಡುಪಿ ಮೂಲದ ಪ್ರಕಾಶ್ ಕುಂದರ್ ಎಂದು ಗುರುತಿಸಲಾಗಿದೆ. ಅವರು ಶಾರ್ಜಾದಲ್ಲಿ ಪತ್ನಿ ಟೀನಾ ಹಾಗೂ ಅಪ್ರಾಪ್ತ ಮಗನೊಂದಿಗೆ ವಾಸಿಸುತ್ತಿದ್ದರು. ಪ್ರಕಾಶ್ ಅವರ ಸಾವಿನ ಬಳಿಕ ಪತ್ನಿ ಹಾಗೂ ಮಗನ ಸಂಪರ್ಕವೂ ಲಭ್ಯವಾಗದಿರುವುದು ಪ್ರಕರಣದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ.
ವರದಿಗಳ ಪ್ರಕಾರ, ಜುಲೈ 20ರ ಸುಮಾರಿಗೆ ಪ್ರಕಾಶ್ ತಮ್ಮ ಸಹೋದರನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಸಾಮಾನ್ಯವಾಗಿ ವಾಯ್ಸ್ ಮೆಸೇಜ್ ಮೂಲಕ ಪ್ರತಿಕ್ರಿಯಿಸುತ್ತಿದ್ದ ಅವರು, ಆ ದಿನ ಟೆಕ್ಸ್ ಮೆಸೇಜ್ ಕಳುಹಿಸಿದ್ದರು. ಸಹೋದರರು ದೂರವಾಣಿ ಮೂಲಕ ಮಾತನಾಡುವಂತೆ ಒತ್ತಾಯಿಸಿದಾಗ ಸಂಭಾಷಣೆ ಕಡಿತಗೊಂಡಿತ್ತು ಎನ್ನಲಾಗಿದೆ.
ಇದರಿಂದ ಆತಂಕಗೊಂಡ ಸಂಬಂಧಿಕರು ಪ್ರಕಾಶ್ ಕೆಲಸ ಮಾಡುತ್ತಿದ್ದ ಕಂಪನಿಯನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಅವರು ಭಾರತಕ್ಕೆ ತೆರಳಿದ್ದಾರೆ ಎಂದು ಕಂಪನಿ ತಿಳಿಸಿತ್ತು. ಆದರೆ ಪ್ರಕಾಶ್ ತಮ್ಮ ಸ್ವಗ್ರಾಮಕ್ಕೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರಿಗೆ ಅನುಮಾನ ಮೂಡಿದ್ದು, ಶಾರ್ಜಾ ಅಧಿಕಾರಿಗಳನ್ನು ಸಂಪರ್ಕಿಸಿ ನಾಪತ್ತೆ ದೂರು ನೀಡಿದ್ದಾರೆ.
ದಂಪತಿಗಳ ನಡುವೆ ಯಾವುದೇ ಗಂಭೀರ ವೈಮನಸ್ಸು ಅಥವಾ ವಿವಾದವಿದ್ದ ಬಗ್ಗೆ ತಿಳಿದಿರಲಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಪ್ರಕಾಶ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತಕ್ಕೆ ಬಂದು ತೆರಳಿದ್ದರು ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರ್ಜಾ ಪೊಲೀಸರು ತನಿಖೆ ಮುಂದುವರಿಸಿದ್ದು, ಪ್ರಕಾಶ್ ಅವರ ಪತ್ನಿ ಹಾಗೂ ಮಗನ ಇರುವಿಕೆ ಸೇರಿದಂತೆ ಕೊಲೆಯ ಹಿಂದಿನ ನಿಖರ ಕಾರಣಗಳ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ. ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಪ್ರಕಾಶ್ ಅವರ ಮೃತದೇಹವನ್ನು ತಾಲ್ನಾಡಿಗೆ ತರಲು ಕುಟುಂಬಸ್ಥರು ಕಾಯುತ್ತಿದ್ದಾರೆ.
ದೂರಿನ ಆಧಾರದ ಮೇಲೆ ಶಾರ್ಜಾ ಪೊಲೀಸರು ತನಿಖೆ ಆರಂಭಿಸಿದ್ದು, ಹುಡುಕಾಟದ ವೇಳೆ ಪ್ರಕಾಶ್ ಅವರದ್ದೇ ಕಾರಿನಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ. ಅವರನ್ನು ಕೊಲೆ ಮಾಡಲಾಗಿದ್ದು, ಮೃತದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಲಾಗಿತ್ತು ಎನ್ನಲಾಗಿದೆ.
ಪ್ರಕಾಶ್ ಅವರ ಪತ್ನಿ ಟೀನಾ ಹಾಗೂ ಅಪ್ರಾಪ್ತ ಮಗ ಪ್ರಸ್ತುತ ಪತ್ತೆಯಾಗದ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳ ಗಮನ ಅವರತ್ತವೂ ಹರಿದಿದೆ. ಕೊಲೆ ಪ್ರಕರಣದಲ್ಲಿ ಟೀನಾ ಅವರ ಪಾತ್ರವಿದೆಯೇ ಅಥವಾ ಬೇರೆ ಕಾರಣಗಳಿಂದ ಅವರು ಮಗನೊಂದಿಗೆ ಶಾರ್ಜಾದಿಂದ ತೆರಳಿದ್ದಾರೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರು ಶಾರ್ಜಾದಿಂದ ತೆರಳಿ ಭಾರತಕ್ಕೆ ಬಂದಿರುವ ಸಾಧ್ಯತೆಯ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಪ್ರಕಾಶ್ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಟೀನಾ ಶಿಕ್ಷಕಿಯಾಗಿ ಉದ್ಯೋಗದಲ್ಲಿದ್ದರು. ದಂಪತಿಗೆ ಸುಮಾರು 20 ವರ್ಷಗಳ ಹಿಂದೆ ವಿವಾಹವಾಗಿದ್ದು, 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪುತ್ರನಿದ್ದಾನೆ.






