ಆರೋಗ್ಯ

ಆಹಾರ ಪ್ಯಾಕೆಟ್‌ನ ಮೇಲೆ ಎಚ್ಚರಿಕೆ ಗುರುತು ಕಡ್ಡಾಯ: ಶೀಘ್ರದಲ್ಲೇ ಆದೇಶ -ಸುಪ್ರೀಂ ಕೋರ್ಟ್

Views: 21

ಕನ್ನಡ ಕರಾವಳಿ ಸುದ್ದಿ:ಸಕ್ಕರೆ ಉಪ್ಪು ಮತ್ತು ಕೊಬ್ಬಿನಂಶ ಹೆಚ್ಚಿರುವ ಆಹಾರ ಪಟ್ಟಣಗಳ ಮುಂಭಾಗದಲ್ಲಿ ಎಚ್ಚರಿಕೆ ಲೇಬಲ್ ಗಳನ್ನು ಕಡ್ಡಾಯಗೊಳಿಸುವ ಸಂಬಂಧ ಶೀಘ್ರದಲ್ಲಿ ವಿಸ್ಕೃತ ಆದೇಶ ಹೊರಡಿಸುವುದಾಗಿ ಗುರುವಾರ ಸುಪ್ರೀಂ ಕೋರ್ಟ್ ತಿಳಿಸಿದೆ.

ಹೆಚ್ಚಿನ ಪ್ರಮಾಣದ ಉಪ್ಪು, ಸಕ್ಕರೆ ಮತ್ತು ಕೊಬ್ಬಿನಾಂಶವಿರುವ ಆಹಾರ ಪದಾರ್ಥಗಳ ಪೊಟ್ಟಣಗಳ ಮುಂಭಾಗದಲ್ಲಿ ಎಚ್ಚರಿಕೆ ಲೇಬಲ್ ಹಾಕುವ ಬಗ್ಗೆ ಆಹಾರ ಸುರಕ್ಷತೆಗೆ ಸಂಬಂಧಿಸಿದ ಎಲ್ಲರೂ ರಾಷ್ಟ್ರೀಯ ಹಿತಾಸಕ್ತಿಯಿಂದ ಯೋಚಿಸಬೇಕು ಎಂದು ಸುಪ್ರೀಂ ಕೋರ್ಟ್  ಹೇಳಿದೆ.

ಜನರ ಆರೋಗ್ಯದ ಬಗ್ಗೆ, ಅದರಲ್ಲೂ ಮುಖ್ಯವಾಗಿ ಬೆಳೆಯುತ್ತಿರುವ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿಯಿರುವುದರಿಂದ ತಾನು ಈ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ನ್ಯಾಯಾಲಯ ತಿಳಿಸಿದೆ.

ಈ ಗಂಭೀರ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟವರಿಂದ ಕೆಲ ಮಾಹಿತಿಗಳನ್ನು ಕೋರಿ ವಿಸ್ತ್ರತ ಆದೇಶ ಹೊರಡಿಸುವುದಾಗಿ ನ್ಯಾಯಮೂರ್ತಿಗಳಾದ ಜೆ. ಬಿ. ಪರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು ತಿಳಿಸಿತು.

“ನಮ್ಮ ಕಾಳಜಿ ಜನರ, ಅದರಲ್ಲೂ ಮುಖ್ಯವಾಗಿ ಬೆಳೆಯುತ್ತಿರುವ ಮಕ್ಕಳ ಆರೋಗ್ಯದ ಬಗ್ಗೆ ಮಾತ್ರ. ಈ ವಿಷಯಕ್ಕೆ ಸಂಬಂಧಿಸಿದ ಎಲ್ಲರೂ ಇದನ್ನು ರಾಷ್ಟ್ರೀಯ ಹಿತಾಸಕ್ತಿಯಿಂದ ನೋಡಬೇಕೆಂದು ನಾವು ಬಯಸುತ್ತೇವೆ” ಎಂದು ಹೇಳಿದ ಪೀಠವು, ಒಂದೆರಡು ದಿನಗಳಲ್ಲಿ ವಿಸ್ತ್ರತ ಆದೇಶವನ್ನು ಹೊರಡಿಸಲಾಗುವುದು ಎಂದು ಹೇಳಿತು.

ಈ ವಿಷಯದ ಬಗ್ಗೆ ತಾನೂ ಅಧ್ಯಯನ ನಡೆಸಿರುವುದಾಗಿ ತಿಳಿಸಿದ ಸುಪ್ರೀಂ ಕೋರ್ಟ್, ಆದೇಶವನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ಪ್ರಕರಣದ ಪಕ್ಷಗಳಿಗೆ ಸೂಚಿಸಿತು ಹಾಗೂ ವಿಚಾರಣೆಯನ್ನು ಸೆಪ್ಟಂಬರ್ 28ಕ್ಕೆ ಮುಂದೂಡಿತು.

‘3ಎಸ್ ಆ್ಯಂಡ್ ಅವರ್ ಹೆಲ್ತ್ ಸೊಸೈಟಿ’ ಎಂಬ ಸಾರ್ವಜನಿಕ ದತ್ತಿ ಟ್ರಸ್ಟ್ ಸಲ್ಲಿಸಿರುವ ಅರ್ಜಿಯ ಸಂಕ್ಷಿಪ್ತ ವಿಚಾರಣೆಯ ಸಂದರ್ಭದಲ್ಲಿ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ವಿಚಾರಣೆಯ ವೇಳೆ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (ಎಫ್‌ಎಸ್‌ಎಸ್‌ಎಐ) ನ್ಯಾಯಾಲಯವು ಮಹತ್ವದ ಪ್ರಶ್ನೆಯೊಂದನ್ನು ಕೇಳಿತು. “ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ವಿವರಗಳು ಯಾವಾಗಲೂ ಪೊಟ್ಟಣದ ಹಿಂಭಾಗದಲ್ಲಿರುತ್ತವೆ. ಈ ಮಿತಿಯನ್ನು ಮೀರಿದರೆ ಏನು ಮಾಡಬೇಕು? ಆ ಉತ್ಪನ್ನದಲ್ಲಿ ಸಕ್ಕರೆ, ಉಪ್ಪು ಅಥವಾ ಕೊಬ್ಬಿನಾಂಶ ಹೆಚ್ಚಾಗಿದೆ ಎಂದು ಗುರುತಿಸಲು ಪ್ರಾಧಿಕಾರವು ಯಾವುದಾದರೂ ಮಾರ್ಗಸೂಚಿಗಳನ್ನು ರೂಪಿಸಿದೆಯೇ” ಎಂದು ಅದು ಕೇಳಿತು.

ಎಫ್‌ಎಸ್‌ಎಸ್‌ಎಐ ಪರವಾಗಿ ಹಾಜರಾದ ಹಿರಿಯ ವಕೀಲ ಮಣಿಂದ‌ರ್ ಸಿಂಗ್, “ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ಯಾಕೆಟ್‌ನ ಹಿಂಭಾಗದಲ್ಲಿ ಎರಡು ವಿಷಯಗಳನ್ನು ನಮೂದಿಸಬೇಕಾಗುತ್ತದೆ. ಪ್ರತಿ 100 ಗ್ರಾಂ ಪ್ರಮಾಣದಲ್ಲಿರುವ ಅಂಶಗಳು ಹಾಗೂ ಒಂದು ಬಾರಿಯ ಸೇವನೆಯ ಪ್ರಮಾಣವನ್ನು ಅಲ್ಲಿ ತೋರಿಸಬೇಕಾಗುತ್ತದೆ” ಎಂದು ಅವರು ವಿವರಿಸಿದರು.

Related Articles

Back to top button
error: Content is protected !!