ಲಿವ್ ಇನ್ ಸಂಬಂಧ ಮದುವೆಗೆ ಸಮ: ಹೈಕೋರ್ಟ್ ಮಹತ್ವದ ಆದೇಶ
Views: 25
ಕನ್ನಡ ಕರಾವಳಿ ಸುದ್ದಿ:ವಯಸ್ಕರ ಪರಸ್ಪರ ಸಮ್ಮತಿಯ ಲಿವ್ ಇನ್ ಸಂಬಂಧವು ಮದುವೆಗೆ ಸಮಾನವಾಗಿದ್ದು, ಇದರಲ್ಲಿ ಪೋಷಕರು, ಸಂಬಂಧಿಕರು ಅಥವಾ ಸ್ನೇಹಿತರು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಅವರಿದ್ದ ಪೀಠವು, ವಯಸ್ಕರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ಯಾವುದೇ ಹಸ್ತಕ್ಷೇಪ ಅಥವಾ ಬೆದರಿಕೆಗಳಿಲ್ಲದೆ ಒಟ್ಟಿಗೆ ಜೀವಿಸುವ ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ ಎಂದು ಸ್ಪಷ್ಟಪ ಡಿಸಿದೆ. ಅಷ್ಟೇ ಅಲ್ಲದೇ ಯುವತಿಯ ಕುಟುಂಬದಿಂದ ಜೀವ ಬೆದರಿಕೆ ಎದುರಿಸುತ್ತಿದ್ದ ಜೋಡಿಗೆ ರಕ್ಷಣೆ ನೀಡುವಂತೆ ನ್ಯಾಯಾಲಯವು ಪೊಲೀಸರಿಗೆ ನಿರ್ದೇಶನ ನೀಡಿದೆ. ಅರ್ಜಿದಾರರು ಕಾನೂನು ಬದ್ದವಾಗಿ ವಿವಾಹವಾಗದಿದ್ದರೂ, ಇಬ್ಬರೂ ಒಪ್ಪಿಗೆಯ ವಯಸ್ಕರಾಗಿರುವುದರಿಂದ ಅವರ ಸಂಬಂಧವು ಮದುವೆಗೆ ಸಮಾನ ಎಂದು ನ್ಯಾಯಾಲಯ ಹೇಳಿದೆ.
ಜಾತಿ, ಮತ, ಪಂಥ ಅಥವಾ ಧರ್ಮದ ಹಂಗಿಲ್ಲದೆ ವಯಸ್ಕರ ಸಂಬಂಧಗಳನ್ನು ಕಾನೂನು ಮಾನ್ಯ ಮಾಡುತ್ತದೆ. ಸಮಾಜದ ಕಟ್ಟುಪಾಡುಗಳು ಮತ್ತು ಪೂರ್ವಾಗ್ರಹಗಳು ನಾಗರಿಕರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ. ಅಂತಹ ನಿರ್ಬಂಧಗಳು ವ್ಯಕ್ತಿಯ ಪ್ರತ್ಯೇಕ ಅಸ್ತಿತ್ವ ಮತ್ತು ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ವಿವಾಹವಾಗದೇ ಇದ್ದರೂ ವಯಸ್ಕರು ಜೊತೆಯಾಗಿ ಜೀವಿಸುವ ಹಕ್ಕನ್ನು ಸುಪ್ರೀಂ ಕೋರ್ಟ್ ಈ ಹಿಂದೆಯೇ ಎತ್ತಿಹಿಡಿದಿದೆ. ಜೊತೆಗೆ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ-2005 ಸೇರಿದಂತೆ ಹಲವು ಕಾನೂನುಗಳ ಅಡಿಯಲ್ಲಿ ಇಂತಹ ಸಂಬಂಧಗಳಿಗೆ ಈಗಾಗಲೇ ಮಾನ್ಯತೆ ದೊರೆತಿದೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ. ಜಾತಿ, ಧರ್ಮ, ಪಂಥ, ಬಣ್ಣ ಅಥವಾ ನಂಬಿಕೆಯ ಆಧಾರದ ಮೇಲೆ ವಯಸ್ಕರ ವೈಯಕ್ತಿಕ ಆಯ್ಕೆ ಮತ್ತು ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಸಾಮಾಜಿಕ ನೈತಿಕತೆ ಮತ್ತು ಪೂರ್ವಾಗ್ರಹಗಳ ಹೆಸರಿನಲ್ಲಿ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವುದು ವ್ಯಕ್ತಿಯ ಸ್ವತಂತ್ರ ಅಸ್ತಿತ್ವವನ್ನು ನಿರಾಕರಿಸಿದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಏನಿದು ಪ್ರಕರಣ?
30 ವರ್ಷ ವಯಸ್ಸಿನ ಈ ಜೋಡಿ ಕೆಲವು ಸಮಯದಿಂದ ಲಿವ್-ಇನ್ ಸಂಬಂಧದಲ್ಲಿದ್ದು, ಮುಂದೆ ವಿವಾಹವಾಗುವ ಉದ್ದೇಶ ಹೊಂದಿದ್ದರು. ಆದರೆ ಯುವತಿಯ ತಂದೆ ಮತ್ತು ಸಹೋದರ ಈ ಸಂಬಂಧವನ್ನು ವಿರೋಧಿಸಿ ನಿರಂತರವಾಗಿ ಜೀವ ಬೆದರಿಕೆ ಹಾಕುತ್ತಿದ್ದರು. ಈ ಬಗ್ಗೆ ಸ್ಥಳೀಯ ಠಾಣಾಧಿ ಕಾರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಜೋಡಿಯ ಜೀವ ಮತ್ತು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಬೆದರಿಕೆ ಇರುವುದನ್ನು ಪರಿಗಣಿಸಿ ಅವರಿಗೆ ತಕ್ಷಣ ಪೊಲೀಸ್ ರಕ್ಷಣೆ ಒದಗಿಸುವಂತೆ ಆದೇಶಿಸಿದೆ.






