ಆಸ್ಪತ್ರೆಗೆ ನುಗ್ಗಿ ರೋಗಿಗಳ ಎದುರಲ್ಲೇ ಕೋಳಿ ವಿಚಾರಕ್ಕೆ ಧಾಂದಲೆ!
Views: 40
ಕನ್ನಡ ಕರಾವಳಿ ಸುದ್ದಿ: ಕೋಳಿ ವಿಚಾರಕ್ಕೆ ನೆರೆಹೊರೆಯವರ ನಡುವೆ ಶುರುವಾದ ಜಗಳ ವಿಕೋಪಕ್ಕೆ ತಿರುಗಿ, ಕೊನೆಗೆ ಸಾರ್ವಜನಿಕ ಆಸ್ಪತ್ರೆಯಲ್ಲೇ ರೋಗಿಗಳ ಎದುರಲ್ಲೇ ಪರಸ್ಪರ ಹಲ್ಲೆ ನಡೆಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ತಿಪ್ಪಗಾನಹಳ್ಳಿಯಲ್ಲಿ ನಡೆದಿದೆ.
ತಿಪ್ಪಗಾನಹಳ್ಳಿ ಗ್ರಾಮದ ಮಮತಾ ಮತ್ತು ದಾಳಪ್ಪ ದಂಪತಿ ಕೋಳಿಗಳನ್ನು ಸಾಕುತ್ತಿದ್ದರು. ಈ ಕೋಳಿಗಳು ನೆರೆಮನೆಯ ಅಶ್ವತ್ಥಪ್ಪ ಎಂಬುವರ ಮನೆ ಮುಂದೆ ಹೋಗಿ ಗಲೀಜು ಮಾಡಿದ್ದವು. ಇದನ್ನು ಅಶ್ವತ್ಥಪ್ಪ ಅವರ ಮನೆಯವರು ಪ್ರಶ್ನಿಸಿದ್ದು, ಮಾತಿಗೆ ಮಾತು ಬೆಳೆದು ಮಾತಿನ ಚಕಮಕಿ ನಡೆದಿದೆ. ಕ್ಷಣಾರ್ಧದಲ್ಲೇ ಜಗಳ ತೀವ್ರಗೊಂಡು ಎರಡೂ ಕುಟುಂಬದವರ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ, ಪರಸ್ಪರ ಹೊಡೆದಾಟ ನಡೆದಿದೆ.
ಈ ಗಲಾಟೆಯಲ್ಲಿ ತೀವ್ರವಾಗಿ ಗಾಯಗೊಂಡ ದಾಳಪ್ಪ ಹಾಗೂ ರವಿ ಎಂಬುವವರನ್ನು ತಕ್ಷಣವೇ ಗೌರಿಬಿದನೂರಿನ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ವೈದ್ಯರು ಚಿಕಿತ್ಸೆ ನೀಡುತ್ತಿದ್ದ ವೇಳೆಯಲ್ಲೇ ಆಸ್ಪತ್ರೆಗೆ ನುಗ್ಗಿದ ಅಶ್ವತ್ಥಪ್ಪ ಮತ್ತು ಅವರ ಬೆಂಬಲಿಗರು, ಗಾಯಾಳು ರವಿ ಹಾಗೂ ಮಮತಾ ಅವರ ಮೇಲೆ ಮತ್ತೆ ದೌರ್ಜನ್ಯ ನಡೆಸಿ ಹಲ್ಲೆ ಮಾಡಿದ್ದಾರೆ. ಆಸ್ಪತ್ರೆಯ ಒಳಗಡೆಯೇ ಈ ರೀತಿ ಗಲಾಟೆ ನಡೆದಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಮತ್ತು ಸಾರ್ವಜನಿಕರು ತೀವ್ರ ಭೀತಿಗೆ ಒಳಗಾದರು.
ಆಸ್ಪತ್ರೆಯಲ್ಲಿ ಗಲಾಟೆ ನಡೆಯುತ್ತಿರುವ ವಿಷಯ ತಿಳಿಯುತ್ತಿದ್ದಂತೆಯೇ ಗೌರಿಬಿದನೂರು ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಪೊಲೀಸರು, ಮುಂದಿನ ಕಾನೂನು ಕ್ರಮ ಜರುಗಿಸಿ ತನಿಖೆ ಮುಂದುವರಿಸಿದ್ದಾರೆ.






