ಉಡುಪಿ: ಮಾಡೆಲಿಂಗ್ ಯುವತಿ ಬೆಡ್ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತ ದೇಹ ಪತ್ತೆ!
Views: 133
ಕನ್ನಡ ಕರಾವಳಿ ಸುದ್ದಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಸಂಭವಿಸಿದೆ.
ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಕಲ್ಮಾಡಿ ನಿವಾಸಿ ರತ್ನಾ ಅವರ ಪುತ್ರಿ ಕೃತಿ ಬಂಗೇರಾ (27) ಎಂದು ಗುರುತಿಸಲಾಗಿದೆ.
ಕೃತಿ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದು, ನಗರದ ಕಡಿಯಾಳಿ ಬಳಿಯ ಖಾಸಗಿ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಈಕೆ ಕಳೆದ ಸುಮಾರು ಐದು ತಿಂಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದರು ಎನ್ನಲಾಗಿದೆ.
ಮೃತ ಕೃತಿ ಅವರ ತಾಯಿ ರತ್ನ ನೀಡಿದ ದೂರಿನ ಪ್ರಕಾರ, ಆಗಸ್ಟ್ 6ರಂದು ಅವರು ಕೆಲಸದ ನಿಮಿತ್ತ ಮಲ್ಪೆಗೆ ತೆರಳಿದ್ದು, ಎರಡನೇ ಪುತ್ರಿಯೂ ಕೆಲಸದ ಕಾರಣ ಉಡುಪಿಗೆ ಹೋಗಿದ್ದರು. ಮಧ್ಯಾಹ್ನ ಸುಮಾರು 1 ಗಂಟೆಗೆ ಮನೆಗೆ ಹಿಂದಿರುಗಿದ ವೇಳೆ, ಕೃತಿ ತಾಯಿಯನ್ನು ಮನೆಯ ಹೊರಗೆ ಕಳುಹಿಸಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾರೆ.
ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ರತ್ನ ಅವರು ತಮ್ಮ ಸಹೋದರ ಚಂದ್ರ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆದಿದ್ದಾರೆ. ಬಳಿಕ ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದಾಗ, ಬೆಡ್ ರೂಮಿನಲ್ಲಿ ಸೀಲಿಂಗ್ ಫ್ಯಾನ್ ಗೆ ವೇಲ್ ಕಟ್ಟಿಕೊಂಡು ನೇಣು ಬಿಗಿದ ಸ್ಥಿತಿಯಲ್ಲಿ ಕೃತಿ ಮೃತರಾಗಿರುವುದು ಕಂಡುಬಂದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೃತಿ ಕಳೆದ ಹಲವಾರು ದಿನಗಳಿಂದ ಒತ್ತಡದಲ್ಲಿದ್ದರು ಎನ್ನಲಾಗಿದ್ದು ಇದೆ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಂಶಯಿಸಲಾಗಿದೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.






