ಪ್ರೀತಿಸಿ ಮದುವೆಯಾದ ಪತ್ನಿಗೆ ಕೈಕೊಟ್ಟು ಇಬ್ಬರು ಮಕ್ಕಳ ತಾಯಿಯನ್ನೇ ಮದುವೆಯಾದ ಪತಿ
Views: 32
ಕನ್ನಡ ಕರಾವಳಿ ಸುದ್ದಿ: ಪ್ರೀತಿಸಿ ಮದುವೆಯಾಗಿದ್ದ ಪತಿಯೊಬ್ಬ ಗುಟ್ಟಾಗಿ ಮತ್ತೊಂದು ಮದುವೆಯಾಗಿರುವ ಆರೋಪ ಕೇಳಿಬಂದಿದೆ. ಅನಾಥೆಯಾಗಿದ್ದ ಹಿಂದೂ ಮಹಿಳೆಯನ್ನು ಪ್ರೀತಿಸಿ, ಕಾನೂನುಬದ್ಧವಾಗಿ ಮದುವೆಯಾಗಿದ್ದ ಮೊಹಮ್ಮದ್ ಸದಾಕತ್ ಅಲಿ ಎಂಬಾತ, ಇಬ್ಬರು ಮಕ್ಕಳಿರುವ ಮತ್ತೊಬ್ಬ ಮಹಿಳೆಯನ್ನು ವಿವಾಹವಾಗಿ ವಂಚಿಸಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಸುಮಾರು 10 ವರ್ಷಗಳ ಹಿಂದೆ ಕಾವಲಭೈರಸಂದ್ರದಲ್ಲಿರುವ ಸ್ನೇಹಿತರ ಮನೆಗೆ ತೆರಳಿದ್ದ ವೇಳೆ ಮಹಿಳೆಗೆ ಮೊಹಮ್ಮದ್ ಸದಾಕತ್ ಅಲಿಯ ಪರಿಚಯವಾಗಿತ್ತು. ತಂದೆ-ತಾಯಿ ಇಲ್ಲದ ಅನಾಥೆಯಾಗಿದ್ದ ಆಕೆಯೊಂದಿಗೆ ಪರಿಚಯ ಪ್ರೀತಿಗೆ ತಿರುಗಿತ್ತು. ಇಬ್ಬರೂ ಸುಮಾರು 10 ವರ್ಷಗಳ ಕಾಲ ಪ್ರೀತಿಸಿದ ಬಳಿಕ ಐದು ವರ್ಷಗಳ ಹಿಂದೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾನೂನುಬದ್ಧವಾಗಿ ಮದುವೆಯಾಗಿದ್ದರು.
ಈ ಮದುವೆಗೆ ಮೊಹಮ್ಮದ್ನ ಗೆಳೆಯ ಅನಿಲ್ ಕುಮಾರ್ ಮತ್ತು ಅವರ ಪತ್ನಿ ಸಾಕ್ಷಿಯಾಗಿ ಸಹಿ ಹಾಕಿದ್ದರು. ಆದರೆ, ಮದುವೆಯ ವಿಚಾರವನ್ನು ಮೊಹಮ್ಮದ್ ತನ್ನ ಕುಟುಂಬಕ್ಕೆ ತಿಳಿಸಿರಲಿಲ್ಲ. ಬಳಿಕ ಇಬ್ಬರೂ ಕಲ್ಯಾಣನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಸಂಸಾರ ನಡೆಸುತ್ತಿದ್ದರು.
ಕಳೆದ ಒಂದು ತಿಂಗಳಿನಿಂದ ಮೊಹಮ್ಮದ್ ಮನೆಗೆ ಸರಿಯಾಗಿ ಬರುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ಪತ್ನಿ, ಮನೆಗೆ ಯಾಕೆ ಬರುತ್ತಿಲ್ಲ ಎಂದು ಪ್ರಶ್ನಿಸಿ ಗಂಡನೊಂದಿಗೆ ಜಗಳವಾಡಿದ್ದರು. ಈ ವೇಳೆ ಅಸಲಿ ವಿಚಾರ ಬಾಯಿಬಿಟ್ಟ ಮೊಹಮ್ಮದ್, ಈಗಾಗಲೇ ಇಬ್ಬರು ಮಕ್ಕಳಿರುವ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿರುವುದಾಗಿ ತಿಳಿಸಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಸುಮಾರು ಒಂದು ತಿಂಗಳ ಹಿಂದೆಯೇ ಎರಡನೇ ಮದುವೆಯಾಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಸಂತ್ರಸ್ತೆ ಮೊದಲು ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.






