ಇತರೆ

ಮಾದಕ ವಸ್ತು ಮಾರಾಟ ಜಾಲ: ದಿಢೀರನೆ ಐಷಾರಾಮಿ ಕಾರು ಖರೀದಿಸಿದ್ದೇ ಅಸಲಿ ಬಣ್ಣ ಬಯಲು..ಮೂರನೇ ಶಿಕ್ಷಕ್ಷಿ ಬಂಧನ

Views: 55

ಕನ್ನಡ ಕರಾವಳಿ ಸುದ್ದಿ: ಕೇರಳದ ಕೋಯಿಕ್ಕೋಡ್ ಜಿಲ್ಲೆಯ ವಡಕರ ಪ್ರದೇಶದಲ್ಲಿ ನಡೆಯುತ್ತಿದೆ ಎನ್ನಲಾದ ಮಾದಕವಸ್ತು ಕಳ್ಳಸಾಗಣೆ ಮತ್ತು ಹಣ ಜಾಲದ ತನಿಖೆ ಚುರುಕುಗೊಂಡಿದೆ. ಈ ಪ್ರಕರಣದಲ್ಲಿ ಕೇರಳ ಎಸ್ಐಟಿ ಮೂರನೇ ಶಿಕ್ಷಕ್ಷಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪೊಲೀಸರು ಎಂಡಿಎಂಎಯ ಶಂಕಿತ ಮೂಲ, ಹಣದ ಹರಿವು ಮತ್ತು ಜಾಲದಲ್ಲಿ ಹೆಚ್ಚಿನ ಜನರು ಭಾಗಿಯಾಗಿರುವ ಸಾಧ್ಯತೆಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಎಂಡಿಎಂಎ ಸಂಬಂಧಿತ ಪ್ರಕರಣದಲ್ಲಿ ಇಬ್ಬರು ವಿಶೇಷ ಶಿಕ್ಷಕಿಯರನ್ನು ಬಂಧಿಸಿದ ನಂತರ ರಚಿಸಲಾದ ವಿಶೇಷ ತನಿಖಾ ತಂಡ, ಮಾದಕವಸ್ತು ಜಾಲಕ್ಕೆ ಸಂಬಂಧಿಸಿದ ಆಪಾದಿತ ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿದಂತೆ ಬಿಆರ್‌ಸಿ ತರಬೇತುದಾರೆ ಮತ್ತು ಪೆರಂಬ್ರದ ಅವಲಾ ಕುಟೋತ್ ನಿವಾಸಿ ನೀಷ್ಮಾ (31) ಅವರನ್ನು ಬಂಧಿಸಿದೆ.

ದಿಢೀರನೆ ಐಷಾರಾಮಿ ಕಾರು ಖರೀದಿಸಿದ್ದೇ ಅಸಲಿ ಬಣ್ಣ ಬಯಲಾಯ್ತು

ಕೇರಳದ ಪೆರಂಬ್ರ ಬಿಆರ್‌ಸಿ ವ್ಯಾಪ್ತಿಯ ಚೆರುವೆಲ್ಲೂ‌ರ್ ಸರ್ಕಾರಿ ಎಲ್‌ಪಿ ಶಾಲೆಗೆ ಸಂಯೋಜಿತವಾಗಿರುವ ಆಟಿಸಂ ಶಾಲೆಯಲ್ಲಿ ಕಾವ್ಯಾ ಎಂಬಾಕೆ 2016 ರಿಂದ ಸ್ಪೆಷಲ್ ಎಜುಕೇಟರ್ ಆಗಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಳು. ಎಂಎ ಸೈಕಾಲಜಿ ಪದವೀಧರೆಯಾಗಿದ್ದ ಈಕೆ ವಾರಕ್ಕೆ ಮೂರು ದಿನ ಮಾತ್ರ ಶಾಲೆಗೆ ಆಗಮಿಸುತ್ತಿದ್ದಳು. ಕಳೆದ ವರ್ಷ ಕಾರು ಅಪಘಾತಕ್ಕೊಳಗಾಗಿದ್ದ ಈಕೆಯ ಚಿಕಿತ್ಸೆಗಾಗಿ ಶಾಲೆಯ ಶಿಕ್ಷಕರು ಹಾಗೂ ಎಸ್‌ಎಸ್‌ಕೆ ಸಿಬ್ಬಂದಿ ವರ್ಗದವರು ಹಣ ಸಂಗ್ರಹಿಸಿ ಆರ್ಥಿಕ ನೆರವು ನೀಡಿದ್ದರು.

ಆದರೆ, ಚಿಕಿತ್ಸೆಗೆ ಕಷ್ಟಪಡುತ್ತಿದ್ದ ಈಕೆ ಇತ್ತೀಚೆಗೆ ದಿಢೀರನೆ ಅತ್ಯಂತ ದುಬಾರಿ ಐಷಾರಾಮಿ ಕಾರನ್ನು ಖರೀದಿಸಿದ್ದಳು. ವಿದೇಶದಲ್ಲಿರುವ ತನ್ನ ಸಹೋದರನ ವಾಹನ ಇದು ಎಂದು ಕಾವ್ಯಾ ನಂಬಿಸಲು ಯತ್ನಿಸಿದ್ದರೂ ಆಕೆಯ ಈ ದಿಢೀ‌ರ್ ಶ್ರೀಮಂತಿಕೆ ಶಾಲೆಯ ಶಿಕ್ಷಕರಲ್ಲಿ ಹಾಗೂ ಸ್ಥಳೀಯರಲ್ಲಿ ತೀವ್ರ ಅನುಮಾನ ಹುಟ್ಟುಹಾಕಿತ್ತು. ಕೊನೆಗೆ ಪೊಲೀಸರ ಕಾರ್ಯಾಚರಣೆಯಲ್ಲಿ ಈಕೆಯ ಅಸಲಿ ಬಣ್ಣ ಬಯಲಾಗಿದೆ.

ತನಿಖಾ ಸಂಸ್ಥೆಗಳ ಕಣ್ಣು ತಪ್ಪಿಸಲು ಈ ಜಾಲವು ಹಣದ ವಹಿವಾಟಿಗೆ ತಂತ್ರ ರೂಪಿಸಿತ್ತು. ಡ್ರಗ್ಸ್ ಖರೀದಿದಾರರು ಮೊದಲು ಕಾವ್ಯಾಳ ಆಪ್ತ ಗೆಳತಿ ಕೀರ್ತನಾ ಖಾತೆಗೆ ಹಣ ಕಳುಹಿಸುತ್ತಿದ್ದರು. ಈ ಖಾತೆಯಲ್ಲಿ ದೊಡ್ಡ ಮೊತ್ತದ ಹಣ ಸಂಗ್ರಹವಾಗುತ್ತಿದ್ದಂತೆ ಅದನ್ನು ಕಾವ್ಯಾಳ ಬ್ಯಾಂಕ್‌ ಖಾತೆಗೆ ವರ್ಗಾಯಿಸಲಾಗುತ್ತಿತ್ತು. ಕೀರ್ತನಾ ನೇರವಾಗಿ ಡ್ರಗ್ಸ್ ಬಳಕೆದಾರರ ಸಂಪರ್ಕದಲ್ಲಿ ಇಲ್ಲದಿದ್ದರೂ ದೊಡ್ಡ ಮಟ್ಟದ ಡ್ರಗ್ಸ್ ಡೀಲರ್‌ಗಳ ಜೊತೆ ನಿಕಟ ಸಂಪರ್ಕ ಹೊಂದಿರುವುದು ಪೊಲೀಸ್‌ ತನಿಖೆಯಲ್ಲಿ ದೃಢಪಟ್ಟಿದೆ.

ವಡಕರ ಮೂಲದ ಯುವಕನೊಬ್ಬ ಎಂಡಿಎಂಎ ಸಮೇತ ಸಿಕ್ಕಿಬಿದ್ದ ಪ್ರಕರಣದ ಬೆನ್ನುಹತ್ತಿದ ಪೊಲೀಸರಿಗೆ ಕೀರ್ತನಾಳ ಬ್ಯಾಂಕ್‌ ಖಾತೆಯ ಸುಳಿವು ಸಿಕ್ಕಿತ್ತು. ಈ ಆಧಾರದ ಮೇಲೆ ಜುಲೈ 11 ರಂದು ಕೀರ್ತನಾ (28) ಜಿಲೆಯನ್ನು ಬಂಧಿಸಿದ ಪೊಲೀಸರು ಬಳಿಕ ಆಕೆಯ ನೀಡಿದ ಮಾಹಿತಿಯಂತೆ ಕಾವ್ಯಾ (29) ಎಂಬಾಕೆಯನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಕೃತ್ಯ ಎಸಗಿದ ಶಿಕ್ಷಕಿಯರ ವಿರುದ್ಧ ಶಿಕ್ಷಣ ಇಲಾಖೆ ತಕ್ಷಣವೇ ಕಠಿಣ ಕ್ರಮ ಕೈಗೊಂಡಿದೆ.

ಮಾದಕ ವಸ್ತು ಮಾರಾಟ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಕೀರ್ತನಾಳನ್ನು ಈಗಾಗಲೇ ಸೇವೆಯಿಂದ ವಜಾಗೊಳಿಸಲಾಗಿದ್ದು ಕಾವ್ಯಾಳನ್ನು ಸಹ ಇಲಾಖೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶಿಸಲಾಗಿದೆ. ಬಂಧಿತ ಆರೋಪಿಗಳಿಗೆ ಎಂಡಿಎಂಎ ಪೂರೈಸುತ್ತಿದ್ದ ಮುಖ್ಯ ಜಾಲ ಯಾವುದು ಮತ್ತು ಯಾರಿಂದೆಲ್ಲಾ ಹಣ ಹರಿದುಬರುತ್ತಿತ್ತು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತೀವ್ರ ವಿಚಾರಣೆ ಮುಂದುವರಿಸಿದ್ದಾರೆ.

Related Articles

Back to top button
error: Content is protected !!