ಸೊಸೆಯೇ ಪ್ರಿಯಕರನ ಜೊತೆ ಸೇರಿ ತನ್ನ ಮನೆಗೆ ಕನ್ನ ಹಾಕಿ ನಗದು, ಚಿನ್ನಾಭರಣ ಕಳವು!
Views: 45
ಕನ್ನಡ ಕರಾವಳಿ ಸುದ್ದಿ: ಮನೆಗೆ ನುಗ್ಗಿ ಬೀರುವಿನಲ್ಲಿದ್ದ ನಗದು, ಚಿನ್ನಾಭರಣಗಳನ್ನು ದೋಚಿದ್ದ ಪ್ರಕರಣವನ್ನು ಪೊಲೀಸರು ಕೇವಲ ಒಂದೇ ಒಂದು ದಿನದಲ್ಲಿ ಪತ್ತೆ ಹಚ್ಚಿದ್ದಾರೆ. ತನಿಖೆ ನಡೆಸುತ್ತ ಹೋದ ಪೊಲೀಸರಿಗೆ ಬಿಗ್ ಶಾಕ್ ಆಗಿದೆ.
ಮನೆಯ ಸೊಸೆಯೇ ತನ್ನ ಪ್ರಿಯಕರನ ಜೊತೆ ಸೇರಿ ಮನೆಗೆ ಕನ್ನ ಹಾಕಿದ್ದಾಳೆ. ಪೊಲೀಸರ ತನಿಖೆಯಿಂದ ಮನೆಯಲ್ಲಿ ಏನೇನು ಕಳ್ಳತನವಾಗಿತ್ತು ಎನ್ನುವುದು ಸಂಪೂರ್ಣವಾಗಿ ಬಯಲಿಗೆ ಬಂದಿದೆ. ಸದ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಮನೆಯ ಸೊಸೆ ಅಮೃತಾ ಮತ್ತು ಈಕೆಯ ಪ್ರಿಯಕರ ಪರಮೇಶ್ ಅಲಿಯಾಸ್ ಚೇತನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಹಾಸನ ತಾಲ್ಲೂಕಿನ ದೊಡ್ಡಹೊನ್ನೇನಹಳ್ಳಿ ಗ್ರಾಮದ ಕೇಶವೇಗೌಡ ಎಂಬುವವರ ಮನೆಯಲ್ಲಿ ದೊಡ್ಡ ಮಟ್ಟದಲ್ಲಿ ಕಳ್ಳತನ ಮಾಡಲಾಗಿತ್ತು. ಮನೆಯ ಬೀರುವಿನಲ್ಲಿದ್ದ 56,16,000 ರೂಪಾಯಿ ಮೌಲ್ಯದ 441.5 ಗ್ರಾಂ ಚಿನ್ನಾಭರಣ ಮತ್ತು 13 ಲಕ್ಷದ 40 ಸಾವಿರ ರೂಪಾಯಿಗಳನ್ನು ಕಳ್ಳತನ ಮಾಡಲಾಗಿತ್ತು. ಜುಲೈ 25 ರಂದು ಶನಿವಾರ ಕೇಶವೇಗೌಡ, ಇವರ ಪತ್ನಿ ಜಯಲಕ್ಷ್ಮೀ ಮತ್ತು ಮಗ ವೇಣುಗೋಪಾಲ್ ಜಮೀನಿನ ಬಳಿ ಕೆಲಸಕ್ಕೆ ಎಂದು ಹೋಗಿದ್ದರು.
ಈ ವೇಳೆ ಮನೆಯಲ್ಲಿದ್ದ ಸೊಸೆ ಅಮೃತಾ ತನ್ನ ಮಗನನ್ನು ಶಾಲೆಯ ಬಸ್ ಹತ್ತಿಸಿ ಮನೆಯಲ್ಲೇ ಉಳಿದುಕೊಂಡಿದ್ದಳು. ಸೊಸೆ ಮನೆಯಲ್ಲಿ ಇರುತ್ತಾಳೆ ಎಂದು ಕೇಶವೇಗೌಡ ಕುಟುಂಬದವರೆಲ್ಲ ಎಂದಿನಂತೆ ಹೊಲಕ್ಕೆ ಕೆಲಸ ಮಾಡಲು ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದ್ದನ್ನು ಕಂಡು ಅಮೃತಾ, ತನ್ನ ಪ್ರಿಯಕರ ಪರಮೇಶ್‌ಗೆ ಮನೆಯ ಬಳಿ ಬರಲು ಹೇಳಿದ್ದಳು. ಹೇಳಿದಂತೆ ಪರಮೇಶ್ ಮನೆಗೆ ಬಂದಿದ್ದನು.
ಪರಮೇಶ್ ಬರುತ್ತಿದ್ದಂತೆ ಸೊಸೆ ಅಮೃತಾ ಮನೆಯ ಬೀರುವಿನಲ್ಲಿದ್ದ 441.5 ಗ್ರಾಂ ಚಿನ್ನಾಭರಣ ಮತ್ತು 13,40,000 ಸಾವಿರ ರೂಪಾಯಿಗಳನ್ನು ಕಳ್ಳತನ ಮಾಡಿ ಪ್ರಿಯಕರನಿಗೆ ಕೊಟ್ಟಿದ್ದಳು. ಹಣ, ಚಿನ್ನ ಕೊಟ್ಟ ಮೇಲೆ ಮನೆಯ ಮುಂಬಾಗಿಲಿಗೆ ಬೀಗ ಹಾಕದೇ ಕೊಟ್ಟಿಗೆಗೆ ಬೀಗ ಹಾಕಿಕೊಂಡು ಜಮೀನಿಗೆ ಅಮೃತಾ ಹೋಗಿದ್ದಳು. ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಮಾವ ಕೇಶವೇಗೌಡ ಮನೆಗೆ ಬಂದು ನೋಡಿದಾಗ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣಗಳು ಕಳುವಾಗಿರುವುದು ಬೆಳಕಿಗೆ ಬಂದಿದೆ.
ಆಗ ಸೊಸೆ ಅಮೃತಾ, ಕಳ್ಳತನವಾಗಿದೆ ಎಂದು ನಾಟಕವಾಡಿದ್ದಳು. ಅಮೃತಾ ಮತ್ತು ಪ್ರಿಯಕರ ಪರಮೇಶ್ ಅಲಿಯಾಸ್ ಚೇತನ್ ಈ ಇಬ್ಬರು ಹಾಸನ ತಾಲ್ಲೂಕಿನ ಕೆ.ಹಿರೀಹಳ್ಳಿ ಗ್ರಾಮದವರು ಆಗಿದ್ದರು. ಹಲವು ವರ್ಷಗಳಿಂದ ಇಬ್ಬರು ಪರಸ್ಪರ ಪರಿಚಯವಿದ್ದರು. ಇಬ್ಬರು ಸೇರಿ ಕಳ್ಳತನ ಮಾಡಿರುವುದನ್ನು ಪೊಲೀಸರು ಕೇವಲ ಒಂದೇ ಒಂದು ದಿನದಲ್ಲಿ ಪತ್ತೆ ಹಚ್ಚಿದ್ದಾರೆ. ಆರೋಪಿಗಳಾದ ಅಮೃತಾ ಮತ್ತು ಪರಮೇಶ್‌ನನ್ನು ವಿಚಾರಣೆಗೆ ಒಳಪಡಿಸಿದ್ದು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲು ಮಾಡಲಾಗಿದೆ.






