ಇತರೆ

ಕಾಡು ಹಂದಿಗೆ ಹಾಕಿದ ಬಲೆಗೆ ವ್ಯಕ್ತಿ ಬಲಿ: ಶವ ಹೂತು ಹಾಕಿದ್ದ ಮೂವರ ಬಂಧನ

Views: 91

ಕನ್ನಡ ಕರಾವಳಿ ಸುದ್ದಿ,: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಸಮೀಪದ ದೊಣ್ಣೆ ಕೋರನಹಳ್ಳಿ ಗ್ರಾಮದಲ್ಲಿ ಕಾಡುಹಂದಿ ಬೇಟೆಗೆ ಹಾಕಿದ್ದ ವಿದ್ಯುತ್‌ ತಂತಿಯನ್ನು ತುಳಿದು ಒಬ್ಬ ವ್ಯಕ್ತಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಇನ್ನು ದುರಂತವನ್ನು ಮರೆಮಾಚಲು ಬೇಟೆಗಾರರು ಶವವನ್ನು ಯಾರಿಗೂ ತಿಳಿಯದಂತೆ ಹೂತು ಹಾಕಿದ್ದಾರೆ ಎಂದು ಪೊಲೀಸ್‌ ತನಿಖೆಯಲ್ಲಿ ಬಯಲಾಗಿದೆ.

ಒಂದೆಡೆ ಶಿಕಾರಿ ಆಸೆಯಲ್ಲಿ ಕಿಡಿಗೇಡಿಗಳು ಕಾಡುಹಂದಿಗಾಗಿ ಹಾಕಿದ್ದ ವಿದ್ಯುತ್‌ ತಂತಿ ತುಳಿದು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಈ ಘಟನೆಯನ್ನು ಮರೆಮಾಚಲು ಯಾರಿಗೂ ತಿಳಿಯದಂತೆ ಹೂತೂ ಹಾಕಿದ್ದಾರೆ ಎನ್ನಲಾಗಿದೆ. ಮೃತ ಕರಿಯಪ್ಪ ಅವರು ತಮ್ಮ ಜಮೀನಿನ ಬಳಿ ನಡೆದುಕೊಂಡು ಹೋಗುತ್ತಿರುವಾಗ ಕಾಡು ಹಂದಿ ಬೇಟೆಗೆ ಹಾಕಿದ್ದ ವಿದ್ಯುತ್‌ ತಂತಿಯನ್ನು ತುಳಿದಿದ್ದಾರೆ.

ತೀವ್ರ ವಿದ್ಯುತ್‌ ಶಾಕ್‌ ಒಳಗಾದ ಕರಿಯಪ್ಪ ಅವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇನ್ನು ಅದನ್ನು ನೋಡಿದ ಬೇಟೆಗಾರರು ಕರಿಯಪ್ಪ ಶವವನ್ನು ಯಾರಿಗೂ ತಿಳಿಯದಂತೆ ಸಮೀಪದಲ್ಲೇ ಹೂತು ಹಾಕಿದ್ದಾರೆ.

ಆದರೆ ಕರಿಯಪ್ಪ ಎಲ್ಲೂ ಕಾಣದಿದ್ದಾಗ ಕುಟುಂಬಸ್ಥರು ಹುಡುಕಲು ಶುರು ಮಾಡಿದ್ದಾರೆ. ಜಮೀನಿನ ಬಳಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕರಿಯಪ್ಪ ಅವರ ಓಡಾಟ ಪತ್ತೆಯಾಗಿದೆ. ಆದರೆ ಕೆಲವೇ ಹೊತ್ತಿನಲ್ಲಿ ಅದೇ ಮಾರ್ಗದಲ್ಲಿ ಮತ್ತೊಬ್ಬ ವ್ಯಕ್ತಿ ಓಡಾಡುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಆ ವ್ಯಕ್ತಿಯನ್ನು ಹಿಡಿದು ವಿಚಾರಿಸಿದಾಗ ಘಟನೆಯ ಸತ್ಯ ಬಯಲಾಗಿದೆ.

ಪ್ರಕರಣ ಸಂಬಂಧ ಯಗಟಿ ಪೊಲೀಸರಿಂದ ಮೂವರು ಆರೋಪಿಗಳಾದ ಚಂದ್ರಪ್ಪ, ಕೆಂಚಪ್ಪ ಹಾಗೂ ಯದುಕುಮಾರ ಎಂಬ ಮೂವರನ್ನು ಬಂಧನ ಮಾಡಲಾಗಿದೆ. ಆರೋಪಿಗಳು ಕಾಡುಹಂದಿ ಬೇಟೆಗಾಗಿ ವಿದ್ಯುತ್‌ ತಂತಿ ಹಾಕಿದ್ದರು ಎಂದು ತಿಳಿದುಬಂದಿದೆ.

ಕರಿಯಪ್ಪ ಅವರು ಆ ತಂತಿಯನ್ನು ತುಳಿದು ಸಾವನ್ನಪ್ಪಿದ ನಂತರ ಶವವನ್ನು ಹೂತು ಹಾಕಿರುವುದಾಗಿ ಪೊಲೀಸ್‌ ತನಿಖೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಶವವನ್ನು ತರೀಕೆರೆ ಎಸಿ ಎದುರು ಹೂತು ಹಾಕಲಾಗಿದ್ದು, ಹೊರತೆಗೆಯಲಾಗುತ್ತದೆ ಎಂದು ಹೇಳಲಾಗಿದೆ.

Related Articles

Back to top button
error: Content is protected !!