ಜನಮನ

ಕೋಟೇಶ್ವರ ಒಳಪೇಟೆಯಲ್ಲಿ ಅಲ್ಲಲ್ಲಿ ಅತಿಕ್ರಮಣದಿಂದಾಗಿ ಜನಸಂದಣಿ: ಸುಗಮ ಸಂಚಾರಕ್ಕೆ ಸಾರ್ವಜನಿಕರ ಆಗ್ರಹ 

Views: 109

ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ಒಳಪೇಟೆಯಲ್ಲಿ ಲೋಕೋಪಯೋಗಿ ಇಲಾಖೆಗೊಳಪಟ್ಟ ಪ್ರಮುಖ ರಸ್ತೆ ಅಲ್ಲಲ್ಲಿ ಅತಿಕ್ರಮಣವಾಗಿದ್ದು, ಈ ಒತ್ತುವರಿ ಸರಿಪಡಿಸಿ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ಸುಗಮ ಸಂಚಾರಕ್ಕೆ ಸಮಸ್ಯೆಯಾಗದಂತೆ ಕ್ರಮವಹಿಸಬೇಕೆಂದು ಕೋಟೇಶ್ವರ ಗ್ರಾ.ಪಂ ಎದುರು ಜಮಾಯಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪಿಡಬ್ಲ್ಯೂಡಿ ಇಲಾಖೆಯ ಕುಂದಾಪುರ ವಿಭಾಗದ ಕಿರಿಯ ಇಂಜಿನಿಯರ್ ರಾಮು ಶೇಖರ್ ಹೊದ್ಲೂರು ಸ್ಥಳೀಯರ ಸಮಸ್ಯೆ ಆಲಿಸಿದರು. ಕೂಡಲೇ ಈ ಬಗ್ಗೆ ಸಂಬಂದಪಟ್ಟ ಇಲಾಖೆಗಳ ಜೊತೆಗೂಡಿ ಸರ್ವೇ ಕಾರ್ಯ ನಡೆಸಿ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ನೀಡುವ ಭರವಸೆ ನೀಡಿದರು.

ಬೀಜಾಡಿ ಬೈಪಾಸ್‌ನಿಂದ ಕೋಟೇಶ್ವರ ಮೀನು ಮಾರುಕಟ್ಟೆ (ಕಿನಾರ ಜಂಕ್ಷನ್) ತನಕದ ಒಳ ಪೇಟೆಯ ಇಕ್ಕೆಲಗಳಲ್ಲಿ ಪಿಡಬ್ಲ್ಯೂಡಿ ಇಲಾಖೆಗೊಳಪಟ್ಟ ರಸ್ತೆಗೂ ಹೊಂದಿಕೊಂಡಂತೆ ಇರುವ ಬಹಳಷ್ಟು ಭಾಗಗಳಲ್ಲಿ ಒತ್ತುವರಿಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೆಲ ಭಾಗಗಳಲ್ಲಿ ರಸ್ತೆಯವರೆಗೂ ಅಂಗಡಿಗಳು, ಅಂಗಡಿಗಳ ಮೇಲ್ಮಾಡು, ಗೇಟುಗಳು ವ್ಯಾಪಿಸಿದೆ.ಜನಸಂದಣಿಯಿಂದ ಖಾಸಗಿ ಬಸ್ಸುಗಳು ಇಲ್ಲಿನ ಸಮಸ್ಯೆಯಿಂದ ಒಳ ಪ್ರವೇಶವನ್ನೇ ಬಹುತೇಕ ಕಡಿತಗೊಳಿಸಿವೆ.

ಒಳಪೇಟೆ ರಸ್ತೆಯಲ್ಲಿ ಸುಗಮ ಸಂಚಾರ ಸಹಿತ ವಾಹನ ಪಾರ್ಕಿಂಗ್ ಸಮಸ್ಯೆ ಹೆಚ್ಚಿದೆ. ಲೋಕೋಪಯೋಗಿ ಇಲಾಖೆ ಗೊಳಪಡುವ ರಸ್ತೆಯಾಗಿರುವುದರಿಂದ ನಿಯಮಾನುಸಾರ ಒತ್ತುವರಿ ಮಾಡಿ ಕೊಂಡವರಿಗೆ ನೋಟಿಸ್ ನೀಡಿ ಅಗತ್ಯ ಕ್ರಮವಹಿಸಿ  ಒತ್ತುವರಿಯನ್ನು ಶೀಘ್ರ ತೆರವುಗೊಳಿಸಬೇಕು. ಸ್ಥಳೀಯ ಗ್ರಾ.ಪಂ ವ್ಯಾಪ್ತಿಗೊಳಪಡುವ ಪ್ರದೇಶದಲ್ಲಿಯೂ ಇಂತಹ ಸಮಸ್ಯೆಗಳಿದ್ದು ಅಧಿಕಾರಿಗಳು ಇಚ್ಚಾಶಕ್ತಿಯಿಂದ ಕೆಲಸ ಮಾಡಿದರೆ ಇದೆಲ್ಲವೂ ನಿವಾರಣೆಯಾಗಿ ಜನರಿಗೆ ಅನುಕೂಲವಾಗಲಿದೆ ಎಂದು ಸಾರ್ವಜನಿಕರ ಪರವಾಗಿ ಕೋಟೇಶ್ವರ ಗ್ರಾ.ಪಂ ಮಾಜಿ ಸದಸ್ಯ ಲೋಕೇಶ್ ಅಂಕದಕಟ್ಟೆ, ಬೀಜಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರಕಾಶ್ ಪೂಜಾರಿ ಬೀಜಾಡಿ, ಸ್ಥಳೀಯ ಪ್ರಮುಖರಾದ ನಾರಾಯಣ ಮೊಗವೀರ, ಮಹೇಶ್ ಶೆಣೈ, ಸ್ಥಳೀಯರು, ರಿಕ್ಷಾ, ವಾಹನ ಚಾಲಕರು, ತಿಳಿಸಿದರು.

ಕೋಟೇಶ್ವರ ಒಳಪೇಟೆಯಲ್ಲಿ ಕೆಲವೆಡೆ ಅಂಗಡಿ ಕೋಣೆಗಳ ನಿರ್ಮಾಣ, ಸಂಚಾರ ದಟ್ಟಣೆ ಸಮಸ್ಯೆ, ರಸ್ತೆ ಜಾಗ ಒತ್ತುವರಿ ವಿಚಾರದಲ್ಲಿ ಸಾರ್ವಜನಿಕರು ತಮ್ಮ ದೂರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಕಂದಾಯ, ಲೋಕೋಪ ಯೋಗಿ ಇಲಾಖೆ, ಗ್ರಾಮಪಂಚಾಯತಿ ಜಂಟಿ ಸರ್ವೇ ನಡೆಸಿ, ಗಡಿ ಗುರುತು ಮಾಡಿ, ಒತ್ತುವರಿಯಾದ ಜಾಗವಿದ್ದರೆ ಅದನ್ನು ತೆರವುಗೊಳಿಸಲು ತಕ್ಷಣ ಅಗತ್ಯ ಕ್ರಮವಹಿಸಲಾಗುತ್ತದೆ ಎಂದು ಕೋಟೇಶ್ವರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ದಿನೇಶ್ ನಾಯ್ಕ್ ಜನತೆಗೆ ಭರವಸೆ ನೀಡಿದ್ದಾರೆ.

 

 

 

 

Related Articles

Back to top button
error: Content is protected !!