ಪೂಜೆ ಮಾಡುವ ನೆಪದಲ್ಲಿ ಚಿನ್ನ,ನಗದು ದೋಚಿದ ನಕಲಿ ಸ್ವಾಮೀಜಿ ಪರಾರಿ
Views: 55
ಕನ್ನಡ ಕರಾವಳಿ ಸುದ್ದಿ: ಮಗಳ ವೈವಾಹಿಕ ಜೀವನದಲ್ಲಿನ ಸಮಸ್ಯೆಗಳನ್ನು ವಿಶೇಷ ಪೂಜೆ ಹಾಗೂ ಮಂತ್ರ ತಂತ್ರಗಳ ಮೂಲಕ ಪರಿಹರಿಸಿಕೊಡುವುದಾಗಿ ನಂಬಿಸಿ 37 ವರ್ಷದ ಮಹಿಳೆಯೊಬ್ಬರಿಂದ 43 ಗ್ರಾಂ ಚಿನ್ನಾಭರಣ ಹಾಗೂ 1.3 ಲಕ್ಷ ರು. ನಗದನ್ನು ನಕಲಿ ಸ್ವಾಮೀಜಿಯೊಬ್ಬ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ವಂಚನೆಗೊಳಗಾದ ಗೀತಾ ಎಂಬುವರು ನೀಡಿದ ದೂರಿನ ಮೇರೆಗೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಂತ್ರಸ್ತೆ ಗೀತಾ ಅವರ ಕಿರಿಯ ಮಗಳು ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಳು. ಈ ವೇಳೆ ನೆರೆಹೊರೆಯವರೊಬ್ಬರು ಗೀತಾ ಅವರಿಗೆ ಶಿವಕಾಲಿ ಅಲಿಯಾಸ್ ನಿತಿನ್ ಎಂಬಾತನ ಪರಿಚಯ ಮಾಡಿಕೊಟ್ಟಿದ್ದರು. ಆತನಿಗೆ ಅಪಾರ ಆಧ್ಯಾತ್ಮಿಕ ಶಕ್ತಿಗಳಿದ್ದು, ಎಂತಹುದೇ ಕೌಟುಂಬಿಕ ಸಮಸ್ಯೆ ಬಗೆಹರಿಸುತ್ತಾನೆ ಎಂದು ನಂಬಿಸಿದ್ದರು. ಇದನ್ನು ನಂಬಿ ಗೀತಾ ಅವರು ಆರೋಪಿಯನ್ನು ಸಂಪರ್ಕಿಸಿದಾಗ, ನಿಮ್ಮ ಮಗಳ ಮೇಲೆ ಜೀವಕ್ಕೆ ಕಂಟಕ ತರುವಂತಹ ಮಾಟಮಂತ್ರ ಮಾಡಿಸಲಾಗಿದೆ ಎಂದು ಶಿವಕಾಲಿ ಹೆದರಿಸಿದನು.
ಮಗಳ ಮೇಲಿರುವ ದೋಷ ನಿವಾರಣೆಗಾಗಿ ಜೂನ್ 26 ರಂದು ಸಂಜೆ 4 ಗಂಟೆಗೆ ಶಿವಕಾಲಿ, ಗೀತಾ ಅವರ ಮನೆಗೆ ಬಂದಿದ್ದನು. ಪೂಜೆ ಮಾಡುವಾಗ ಮನೆಯಲ್ಲಿ ಬೇರೆ ಯಾರೂ ಇರಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದನು. ಮನೆಯಲ್ಲಿ ನಿಂಬೆಹಣ್ಣು, ಬೂದಿ, ಅರಿಶಿನ ಹಾಗೂ ಮೆಂತ್ಯ ಕಾಳುಗಳನ್ನು ಬಳಸಿ ಮಂತ್ರಗಳನ್ನು ಪಠಿಸುತ್ತಾ ಪೂಜೆ ಆರಂಭಿಸಿದ್ದನು.
ಪೂಜೆಯ ಮಧ್ಯದಲ್ಲಿ ಮಗಳ ದೋಷ ಸಂಪೂರ್ಣ ನಿವಾರಣೆಯಾಗಬೇಕಾದರೆ ಮನೆಯಲ್ಲಿರುವ ಎಲ್ಲಾ ಚಿನ್ನ ಹಾಗೂ ನಗದು ಹಣವನ್ನು ತಂದು ಪೂಜೆಗಿಡಬೇಕು ಎಂದು ಆದೇಶಿಸಿದ್ದನು. ಇದನ್ನು ನಂಬಿದ ಗೀತಾ, ಮನೆ ನವೀಕರಣಕ್ಕಾಗಿ ಇಟ್ಟಿದ್ದ 1.3 ಲಕ್ಷ ರು. ನಗದು ಹಾಗೂ 43 ಗ್ರಾಂ ತೂಕದ ಚಿನ್ನದ ಸರ, ಬಳೆ ಮತ್ತು ಉಂಗುರಗಳನ್ನು ತಂದು ಆತ ಹೇಳಿದಂತೆ ಬಟ್ಟೆಯ ಗಂಟಿನಲ್ಲಿ ಇಟ್ಟಿದರು. ಪೂಜೆ ಮಾಡುವ ನೆಪದಲ್ಲಿ ಆರೋಪಿ ಶಿವಕಾಲಿ, ತನ್ನ ಬ್ಯಾಗ್ನಿಂದ ಬೂದಿ ತೆಗೆದು ಅವರ ಮುಖಕ್ಕೆ ಎರಚಿದ್ದಾನೆ. ಬಳಿಕ ಅವರ ತಲೆಯನ್ನು ಬಗ್ಗಿಸಿ ಬೆನ್ನಿನ ಮೇಲೆ ಜೋರಾಗಿ ಹೊಡೆದಿದ್ದಾನೆ. ಇದರ ತೀವ್ರತೆಗೆ ಗೀತಾ ಅವರು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಸುಮಾರು 30 ನಿಮಿಷಗಳ ನಂತರ ಅವರಿಗೆ ಪ್ರಜ್ಞೆ ಬಂದಾಗ ಸ್ವಾಮೀಜಿ ಹಾಗೂ ಪೂಜೆಯಿಟ್ಟಿದ್ದ ಎಲ್ಲ ಒಡವೆ, ನಗದು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಗಂಟು ಬಿಚ್ಚಿದರೆ ರಕ್ತ ವಾಂತಿ ಮಾಡಿ ಸಾಯ್ತಿಯಾ ಎಂದ ಸ್ವಾಮೀಜಿ
ಈ ವೇಳೆ ಆತ ಚಾಣಾಕ್ಷತನದಿಂದ, ನಿಮ್ಮ ಆಭರಣಗಳನ್ನು ನಿಮ್ಮದೇ ಮನೆಯಲ್ಲಿರುವ ಬಟ್ಟೆಯ ಗಂಟಿನಲ್ಲಿ ಕಟ್ಟಿ ಇಡಲಾಗಿದೆ. ಅದನ್ನು 2 ದಿನ ಯಾರೂ ಮುಟ್ಟಬಾರದು. ಒಂದು ವೇಳೆ ಮುಂಚಿತವಾಗಿ ಬಿಚ್ಚಿದರೆ ನೀನು ರಕ್ತ ವಾಂತಿ ಮಾಡಿಕೊಂಡು ಸತ್ತುಹೋಗುತ್ತೀಯಾ ಎಂದು ಭಯ ಹುಟ್ಟಿಸಿದ್ದಾನೆ. ಪ್ರಾಣ ಭಯದಿಂದ ಗೀತಾ ಮನೆಗೆ ಮರಳಿ ಎರಡು ದಿನಗಳ ಕಾಲ ಆ ಗಂಟನ್ನು ಬಿಚ್ಚದೆ ಹಾಗೇ ಇಟ್ಟಿದ್ದಾರೆ. ಎರಡು ದಿನಗಳ ನಂತರ ಅನುಮಾನ ಬಂದು ಗಂಟನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಬರೀ ಹುಣಿಸೇ ಹಣ್ಣು ಇರುವುದು ಕಂಡುಬಂದಿದೆ. ತಕ್ಷಣವೇ ಮಹಿಳೆ ಆತನ ಮೊಬೈಲ್ ಕರೆ ಮಾಡಿದ್ದಾರೆ. ಆದರೆ ಫೋನ್ ಸ್ವಿಚ್ ಆಫ್ ಆಗಿತ್ತು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.






