ಬಿಎಂಟಿಸಿ ಬಸ್‌ನಲ್ಲಿ ಕಂಡಕ್ಟರ್‌ನ ಬ್ಯಾಗ್ ಕದ್ದ ಮಹಿಳೆ ಪೊಲೀಸರು ವಶಕ್ಕೆ
Views: 29
ಕನ್ನಡ ಕರಾವಳಿ ಸುದ್ದಿ: ಬಿಎಂಟಿಸಿ ಬಸ್‌ನಲ್ಲಿ ಚಲಿಸುತ್ತಿದ್ದ ವೇಳೆಯೇ ಮಹಿಳೆಯೊಬ್ಬರು ನಿರ್ವಾಹಕನ ಟಿಕೆಟ್ ಮತ್ತು ಹಣದ ಬ್ಯಾಗ್ ಕಳ್ಳತನ ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆ ಸಂಬಂಧ ಪ್ರಯಾಣಿಕ ಮಹಿಳೆಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ಮಹಿಳೆಯು ಸಾಮಾನ್ಯ ಪ್ರಯಾಣಿಕಳಂತೆ ಬಸ್‌ಗೆ ಹತ್ತಿದ್ದರು. ಬಸ್‌ನಲ್ಲಿ ಪ್ರಯಾಣಿಕರ ದಟ್ಟಣೆ ಇದ್ದಾಗ ನಿರ್ವಾಹಕರು ಎಲ್ಲರಿಗೂ ಟಿಕೆಟ್ ನೀಡುವ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ, ನಿರ್ವಾಹಕರ ಗಮನ ಬೇರೆಡೆ ಇರುವುದನ್ನು ಸೂಕ್ಷ್ಮವಾಗಿ ಗಮನಿಸಿದ ಮಹಿಳೆ, ಅವರ ಟಿಕೆಟ್ ಮತ್ತು ನಗದು ಇದ್ದ ಬ್ಯಾಗ್ ಅನ್ನು ಯಾರಿಗೂ ತಿಳಿಯದಂತೆ ಕದ್ದು ತನ್ನ ಚೀಲದೊಳಗೆ ಇಟ್ಟುಕೊಂಡಿದ್ದಾರೆ. ನಂತರ ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ಅತ್ಯಂತ ಸಾಮಾನ್ಯ ಪ್ರಯಾಣಿಕಳಂತೆ ನಟಿಸುತ್ತಾ ಕುಳಿತಿದ್ದರು ಎಂದು ತಿಳಿದುಬಂದಿದೆ.
ಸ್ವಲ್ಪ ಸಮಯದ ನಂತರ ನಿರ್ವಾಹಕರಿಗೆ ತಮ್ಮ ಟಿಕೆಟ್ ಬ್ಯಾಗ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಬಸ್ ಅನ್ನು ನಿಲ್ಲಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಬಸ್‌ನ ಬಾಗಿಲುಗಳನ್ನು ಮುಚ್ಚಿ, ಎಲ್ಲ ಪ್ರಯಾಣಿಕರ ಬ್ಯಾಗ್‌ಗಳನ್ನು ಪರೀಕ್ಷಿಸಲಾಗಿದೆ. ಅಷ್ಟರಲ್ಲಿ, ಮಹಿಳಾ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ಮುಂದುವರೆಸಿದ್ದಾರೆ.
ಪೊಲೀಸರು ಮತ್ತು ಬಸ್ ಸಿಬ್ಬಂದಿ ಬಸ್‌ನಲ್ಲಿದ್ದ ಪ್ರಯಾಣಿಕರ ಸಾಮಗ್ರಿಗಳನ್ನು ತಪಾಸಣೆ ನಡೆಸುತ್ತಿದ್ದಾಗ, ಆರೋಪಿ ಮಹಿಳೆ ಬಸ್‌ನಿಂದ ಇಳಿದು ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಆದರೆ, ಪೊಲೀಸರು ಆಕೆಯ ಚೀಲವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ನಿರ್ವಾಹಕರ ಟಿಕೆಟ್ ಮತ್ತು ಹಣದ ಬ್ಯಾಗ್ ಆಕೆಯ ಚೀಲದಲ್ಲೇ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ತನ್ನ ಬ್ಯಾಗ್‌ನಲ್ಲೇ ಕದ್ದ ವಸ್ತು ಸಿಕ್ಕಿಬಿದ್ದರೂ, ಆ ಮಹಿಳೆ ತನಗೆ ಏನೂ ಗೊತ್ತಿಲ್ಲ ಎಂದು ವಾದಿಸಿದ್ದಾರೆ. ತಕ್ಷಣ ಬಸ್‌ನ ಬಾಗಿಲು ತೆರೆಯುವಂತೆ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ್ದಾರೆ. ಆದರೆ, ಬಸ್‌ನಲ್ಲಿದ್ದ ಕೆಲವು ಪ್ರಯಾಣಿಕರು ಆಕೆ ನಿರ್ವಾಹಕರ ಬ್ಯಾಗ್ ತೆಗೆದುಕೊಳ್ಳುವುದನ್ನು ಪ್ರತ್ಯಕ್ಷವಾಗಿ ನೋಡಿರುವುದಾಗಿ ಪೊಲೀಸರ ಮುಂದೆ ಸಾಕ್ಷಿ ನುಡಿದಿದ್ದಾರೆ ಎಂದು ವರದಿಯಾಗಿದೆ.
ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಕೊಂಡು ತನಿಖೆ ಆರಂಭಿಸಿದ್ದಾರೆ.






